ಮುಂದಿನ ದಿನಗಳಲ್ಲಿ ದೇವೇಗೌಡರ ಮಕ್ಕಳು ಏನೆಂಬುದನ್ನು ತೋರಿಸುತ್ತೇವೆ: ಹೆಚ್.ಡಿ.ರೇವಣ್ಣ

Update: 2019-08-19 18:47 GMT

ಹಾಸನ, ಆ.19: ಸಿಐಡಿ ಹಾಗೂ ಸಿಬಿಐ ತನಿಖೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಮಾಡಿದ್ದು, ಫೊನ್ ಕದ್ದಾಲಿಕೆ ವಿಚಾರದಲ್ಲಿ ಯಾವ ತನಿಖೆಗಾದರೂ ನಾವು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒಟ್ಟಿಗೆ ರಾಜಕೀಯ ಮಾಡಿ, ಹೆಚ್.ಡಿ. ದೇವೇಗೌಡರ ಮಕ್ಕಳು ಏನು ಎಂಬುದನ್ನು ತೋರಿಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಿಜೆಪಿಗೆ ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮದ್ಯಾಹ್ನ ಮಾತನಾಡಿ, ಭಗವಂತನ ಆರ್ಶೀರ್ವಾದದಿಂದ ಹೆಚ್.ಡಿ.ಕುಮಾರಸ್ವಾಮಿ 14 ತಿಂಗಳು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದರು. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಜೊತೆ ಸೇರಿ ರಾಜಕೀಯ ಮಾಡಲಾಗುವುದು. ದೇವೇಗೌಡರ ಮಕ್ಕಳು ಏನು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಕಿಡಿಕಾರಿದರು.

ಯಾವ ತನಿಖೆಯನ್ನಾದರೂ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಸಿಬಿಐ ತನಿಖೆ ಮಾಡಿ ಎಂದರು. ಯಾವುದೇ ತನಿಖೆ ಮಾಡಲಿ ನಾವು ಸಿದ್ದರಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರದವರೂ ನಮ್ಮ ಫೋನ್ ಟ್ಯಾಪ್ ಮಾಡಿಸಿದ್ದರು. ಕೇಂದ್ರದವರು ಫೋನ್ ಟ್ಯಾಪಿಂಗ್ ಮಾಡಿ ಚುನಾವಣೆ ಸಮಯದಲ್ಲಿ ನಮ್ಮ ಬೆಂಬಲಿಗರ ಮೇಲೆ ಐಟಿ ದಾಳಿ ಮಾಡಿಸಿದ್ದರು ಎಂದು ರೇವಣ್ಣ ಆರೋಪಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಫೋನ್ ಕದ್ದಾಲಿಕೆಯನ್ನು ಸಿಬಿಐಗೆ ನೀಡಲು ಹೇಳಿದ್ದಾರೆ. ಫೋನ್ ಕದ್ದಾಲಿಕೆ ಸೇರಿದಂತೆ ಎಲ್ಲಾ ತನಿಖೆಯನ್ನು ದೇವಗೌಡರು ಎದುರಿಸಿ ಪ್ರಧಾನಿಯಾಗಿದ್ದರು. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರು ಸೇರಿ ನಮ್ಮ ಕುಟುಂಬವನ್ನು ಟಾರ್ಗೇಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹೆಚ್.ವಿಶ್ವನಾಥ್‍ ಯಡಿಯೂರಪ್ಪ ಅವರ ಋಣ ತೀರಿಸಲು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ವಿಶ್ವನಾಥ ಅವರ ಅಳಿಯನಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಸ್ಥಾನವನ್ನು ಯಡಿಯೂರಪ್ಪ ಅವರು ದಯಪಾಲಿಸಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಹಾಗೂ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಶ್ರವಣ ಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News