ಕೊಡಗು: ಮಳೆ ನಿಂತರೂ ಬಿರುಕು ಬಿಡುತ್ತಿರುವ ಭೂಮಿ- ಗ್ರಾಮಸ್ಥರಲ್ಲಿ ಆತಂಕ

Update: 2019-08-19 18:56 GMT

ಮಡಿಕೇರಿ, ಆ.19 : ಮಹಾಮಳೆಯ ಪ್ರವಾಹದಿಂದ ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಕೊಡಗಿನ ಜನತೆಗೆ ಮತ್ತೊಂದು ಆತಂಕ ಎದುರಾಗಿದೆ. ಮಳೆ ನಿಂತು ತಿಳಿ ಬಿಸಿಲಿನ ವಾತಾವರಣವಿದ್ದರೂ ವಿವಿಧ ಪ್ರದೇಶಗಳಲ್ಲಿ ಭೂಮಿ ಬಾಯಿ ಬಿಟ್ಟು ಜನತೆಯ ನಿದ್ದೆ ಗೆಡಿಸಲು ಆರಂಭಿಸಿದೆ. 

ಭಾಗಮಂಡಲದ ಕೋರಂಗಾಲ ಹಾಗೂ ವಿರಾಜಪೇಟೆಯ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ಸಾವು ನೋವುಗಳು ಸಂಭವಿಸಿದ ಬೆನ್ನಲ್ಲೇ ಜಿಲ್ಲೆಯ ಇತರೆಡೆಯೂ ಭೂಮಿ ಬಿರುಕು ಕಾಣಿಸಿಕೊಳ್ಳುತ್ತಿದೆ. ವಿರಾಜಪೇಟೆಯ ಮಲೆತಿರುಕೆ ಬೆಟ್ಟ, ನೆಹರೂ ನಗರ ಹಾಗೂ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡು ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.  

ಪವಿತ್ರ ಕ್ಷೇತ್ರ ತಲಕಾವೇರಿಯ ಜಲಮೂಲದ ನೆಲೆಯಾಗಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಭಾರತೀಯ ಸವೇಕ್ಷಣಾ ಇಲಾಖೆಯ ಇಬ್ಬರು ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ಬಾರಿಯ ಮಳೆಯ ಆರ್ಭಟಕ್ಕೆ ಬ್ರಹ್ಮಗಿರಿ ಬೆಟ್ಟದ ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸವೇಕ್ಷಣಾ ಇಲಾಖೆಯ ವಿಜ್ಞಾನಿಗಳಾದ ಸುನಂದನ್ ಬಾಸು ಹಾಗೂ ಕಪಿಲ್ ಸಿಂಗ್ ಖುದ್ದು ಭೇಟಿ ನೀಡಿದ್ದು, ಅಧ್ಯಯನ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಿವಿಧೆಡೆ ಬಿರುಕು
ಮದೆನಾಡಿನಲ್ಲಿ ಕಾಫಿ ತೋಟದಲ್ಲಿ ಭಾರೀ ಗಾತ್ರದಲ್ಲಿ ಹೊಂಡವೊಂದು ಸೃಷ್ಟಿಯಾಗಿದೆ. ಹೊಂಡದೊಳಗೆ ಒಂದು ಕಾಫಿ ಗಿಡ, ಅಡಿಕೆ ಮರ ಹುದುಗಿ ಹೋಗಿದೆ. ಅಲ್ಲದೆ ಕಣ್ಣಿಗೆ ನಿಲುವಕಷ್ಟು ಆಳಕ್ಕೆ ಸುರಂಗ ಮಾದರಿಯಲ್ಲಿ ಹೊಂಡವಾಗಿದೆ. ಸ್ಥಳೀಯ ನಿವಾಸಿ ಪಟ್ಟಡ ಲೋಬಯ್ಯ ಅವರ ಕಾಫಿ ತೋಟದಲ್ಲಿ ಈ ಬೃಹತ್ ಹೊಂಡ ಸೃಷ್ಟಿಯಾಗಿದ್ದು, ಗ್ರಾಮದಲ್ಲಿ ಆತಂಕ ಮೂಡಿದೆ. 

ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮದ ನಾಂಗಾಲ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 40 ಕುಟುಂಬಗಳು ಆತಂಕದೊಂದಿಗೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಗ್ರಾ.ಪಂ ಸದಸ್ಯ ವಸಂತ್ ಭೇಟಿ ನೀಡಿ ಪರಿಶೀಲಿಸಿದ್ದು, ಕಳೆದವಾರ ಮಹಾಮಳೆಗೆ ಇದೇ ಪ್ರದೇಶದ ಮನೆಯೊಂದು ನೆಲಸಮಗೊಂಡಿರುವುದನ್ನು ನೆನಪಿಸಿಕೊಂಡಿದ್ದಾರೆ. 

ಎಲ್ಲೆಂದರಲ್ಲಿ ಅನಿರೀಕ್ಷಿತವಾಗಿ ಭೂಮಿ ಬಾಯಿ ಬಿಡುತ್ತಿರುವುದನ್ನು ಗಮನಿಸುತ್ತಿರುವ ಜಿಲ್ಲೆಯ ಜನ ಸಹಜವಾಗಿಯೇ ಆತಂಕಗೊಂಡಿದ್ದಾರೆ. ಜಿಲ್ಲಾಡಳಿತ ಪ್ರಕೃತಿಯ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News