ಅಶಿಸ್ತಿನ ವರ್ತನೆ ಸಾಕ್ಷಿಗೆ ಶೋಕಾಸ್ ನೋಟಿಸ್

Update: 2019-08-19 19:21 GMT

ಹೊಸದಿಲ್ಲಿ, ಆ.19: ಅನುಮತಿ ಪಡೆಯದೇ ರಾಷ್ಟ್ರೀಯ ಶಿಬಿರವನ್ನು ತೊರೆದಿರುವ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಸಹಿತ 25 ಶಿಬಿರಾರ್ಥಿಗಳಿಗೆ ಭಾರತ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ)ನೋಟಿಸ್ ಜಾರಿಗೊಳಿಸಿದೆ.

 ನೋಟಿಸ್‌ಗೆ ತಕ್ಷಣವೇ ಉತ್ತರ ನೀಡಿರುವ ಸಾಕ್ಷಿ ತನ್ನ ತಪ್ಪಿಗೆ ಕ್ಷಮೆ ಕೋರಿದ್ದಾರೆ. ಹೀಗಾಗಿ ಅವರನ್ನು ಶಿಬಿರಕ್ಕೆ ಸೇರಿಸಿಕೊಳ್ಳಲಾಗಿದೆ.

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಲಕ್ನೋದ ಸಾಯ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದ 45 ಮಹಿಳಾ ಕುಸ್ತಿಪಟುಗಳ ಪೈಕಿ 25 ಕುಸ್ತಿಸ್ಪರ್ಧಿಗಳು ರಾಷ್ಟ್ರೀಯ ಒಕ್ಕೂಟದಿಂದ ಅನುಮತಿ ಪಡೆಯದೇ ರಾಷ್ಟ್ರೀಯ ಶಿಬಿರಕ್ಕೆ ಗೈರು ಹಾಜರಾಗಿದ್ದರು.

25 ಕುಸ್ತಿಪಟುಗಳ ಪೈಕಿ ಸಾಕ್ಷಿ(62ಕೆಜಿ), ಸೀಮಾ ಬಿಸ್ಲಾ(50ಕೆಜಿ) ಹಾಗೂ ಕಿರಣ್(76ಕೆಜಿ)ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.

  ಮೂವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಉಳಿದ ಕುಸ್ತಿಪಟುಗಳನ್ನು ಡಬ್ಲುಎಫ್‌ಐನ ಮುಂದಿನ ಆದೇಶದ ತನಕ ರಾಷ್ಟ್ರೀಯ ಶಿಬಿರದಿಂದ ಉಚ್ಚಾಟಿಸಲಾಗಿದೆ. ಹಬ್ಬ ಆಚರಿಸಲು ಮನೆಗೆ ಹೋಗಿದ್ದಾಗಿ ಸಾಕ್ಷಿ ಹೇಳಿದ್ದಾರೆ. ಇದಕ್ಕೆ ಅನುಮತಿ ಪಡೆಯದೇ ತಪ್ಪು ಮಾಡಿದ್ದೇನೆ ಎಂದಿದ್ದಾರೆ. ಸೀಮಾ ಹಾಗೂ ಕಿರಣ್ ಕೂಡ ಇದೇ ಕಾರಣ ನೀಡಿದ್ದಾರೆ. ಈ ಮೂವರು ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿ, ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಅವರು ಶಿಬಿರಕ್ಕೆ ವಾಪಸಾಗಲಿದ್ದಾರೆೞೞಎಂದು ಡಬ್ಲುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ಹೇಳಿದ್ದಾರೆ. ‘‘ಭಾರತ ತಂಡ ಪೂರ್ವ ತಯಾರಿ ಟೂರ್ನಮೆಂಟ್‌ಗಳಿಗೆ ಬೆಲಾರಸ್ ಹಾಗೂ ಇಸ್ಟೋನಿಯಕ್ಕೆ ಪ್ರಯಾಣಿಸಿದ ಬಳಿಕ ಉಳಿದ ಕುಸ್ತಿಪಟುಗಳು ಯಾವುದೇ ಅನುಮತಿ ಪಡೆಯದೇ ಶಿಬಿರ ತೊರೆದಿದ್ದಾರೆ. ಸಾಕ್ಷಿ, ಸೀಮಾ ಹಾಗೂ ಕಿರಣ್‌ಗೆ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಕಳುಹಿಸಿದ್ದೆವು. ಇತರರ ಬಗ್ಗೆ ನಾವು ಚಿಂತಿಸುವುದಿಲ್ಲ. ಅವರನ್ನು ಅಶಿಸ್ತಿನ ನೆಲೆಯಲ್ಲಿ ಉಚ್ಚಾಟಿಸಲಾಗಿದೆ. ಅವರನ್ನು ಅಗತ್ಯವಿದ್ದರೆ ಶಿಬಿರಕ್ಕೆ ಕರೆಸಲಾಗುವುದು’’ ಎಂದು ವಿನೋದ್ ಥೋಮರ್ ಹೇಳಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಸೆಪ್ಟಂಬರ್ 14ರಿಂದ 22ರ ತನಕ ಕಝಕ್‌ಸ್ತಾನದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News