ಬಿಎಸ್‌ವೈ ಸಂಪುಟ ವಿಸ್ತರಣೆ: ಇಲ್ಲಿದೆ 17 ನೂತನ ಸಂಪುಟ ದರ್ಜೆ ಸಚಿವರ ಪರಿಚಯ

Update: 2019-08-20 12:37 GMT

ಬೆಂಗಳೂರು, ಆ.20: ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 17 ಸಂಪುಟ ದರ್ಜೆಯ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ನಗರದ ರಾಜಭವನದಲ್ಲಿ ಆಯೋಜಿಸಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಅಧಿಕಾರ ಪದ ಹಾಗೂ ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ನೂತನ ಸಂಪುಟಕ್ಕೆ ಸೇರ್ಪಡೆಯಾದ ಬಹುತೇಕ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಂಪುಟಕ್ಕೆ ಸೇರ್ಪಡೆಯಾದ ಎಲ್ಲಾ 17 ಸಚಿವರ ಪರಿಚಯ ಇಲ್ಲಿದೆ..

ಗೋವಿಂದ ಕಾರಜೋಳ: ಬಿಜೆಪಿ ಹಿರಿಯ ದಲಿತ ನಾಯಕ ಎಂದು ಗುರುತಿಸಿಕೊಂಡಿರುವ ಗೋವಿಂದ ಕಾರಜೋಳ ಅವರು 1994ರಲ್ಲಿ ಮೊದಲ ಬಾರಿಗೆ ಜನತಾ ಪರಿವಾರದ ಮೂಲಕ ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಅವರು ಅಲ್ಪಅಂತರದಲ್ಲಿ ಸೋಲುಂಡಿದ್ದರು. ನಂತರ ಬಿಜೆಪಿ ಸೇರಿದ ಅವರು 2004ರಿಂದಲೂ ಮುಧೋಳ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಈ ಹಿಂದೆಯೂ ಮಂತ್ರಿ ಸ್ಥಾನ ನಿಭಾಯಿಸಿದ ಅನುಭವ ಇದೆ.

ವಯಸ್ಸು: 68, ಜಾತಿ : ದಲಿತ, ಕ್ಷೇತ್ರ : ಮುಧೋಳ, ಶಿಕ್ಷಣ: 10ನೇ ತರಗತಿ

ಡಾ.ಸಿ.ಎನ್.ಅಶ್ವತ್ಥ ನಾರಾಯಣ್: ಮಲ್ಲೇಶ್ವರಂ ಕ್ಷೇತ್ರದಿಂದ 3 ಬಾರಿ ಶಾಸಕರಾಗಿರುವ ಇವರು, ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.

ವಯಸ್ಸು: 50, ಜಾತಿ : ಒಕ್ಕಲಿಗ, ಕ್ಷೇತ್ರ : ಮಲ್ಲೇಶ್ವರಂ, ಶಿಕ್ಷಣ: ಎಂಬಿಬಿಎಸ್

ಲಕ್ಷ್ಮಣ ಸಂಗಪ್ಪ ಸವದಿ: ಆರಂಭದಲ್ಲಿ ಜನತಾ ಪರಿವಾರದ ಜೊತೆ ಗುರುತಿಸಿಕೊಂಡಿದ್ದರು. 2004ರಲ್ಲಿ ಬಿಜೆಪಿ ಸೇರಿ ಅಲ್ಲಿಂದ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದರು. ಈ ಹಿಂದೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದರು. ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡಿದ್ದರಿಂದ ಸಚಿವ ಸ್ಥಾನ ಕಳೆದುಕೊಂಡಿದ್ದರು. ಕಳೆದು ಚುನಾವಣೆಯಲ್ಲಿ ಸೋತಿದ್ದರು.

ವಯಸ್ಸು: 59, ಕ್ಷೇತ್ರ: ಅಥಣಿ(2018ರ ಚುನಾವಣೆಯಲ್ಲಿ ಸೋಲು), ಜಾತಿ: ಲಿಂಗಾಯತ ಗಾಣಿಗ, ಶಿಕ್ಷಣ: ದ್ವಿತೀಯ ಪಿಯುಸಿ

ಕೆ.ಎಸ್.ಈಶ್ವರಪ್ಪ: 1982ರಲ್ಲಿ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾದರು. 1989ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿ ಗೆದ್ದಿದ್ದರು. ಬಳಿಕ ನಾಲ್ಕು ಬಾರಿ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದರು. 1992ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದರು.

2010ರಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಈಶ್ವರಪ್ಪ, 2012ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದು, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2013ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ ಕೆ.ಬಿ.ಪ್ರಸನ್ನ ಕುಮಾರ್ ಎದುರು ಸೋತಿದ್ದರು. ತದನಂತರ, ವಿಧಾನಪರಿಷತ್ತಿಗೆ ಅವರನ್ನು ನಾಮ ನಿರ್ದೇಶನ ಮಾಡಲಾಯಿತು.

ವಯಸ್ಸು: 70, ಜಾತಿ : ಕುರುಬ, ಕ್ಷೇತ್ರ: ಶಿವಮೊಗ್ಗ, ಶಿಕ್ಷಣ: ವಾಣಿಜ್ಯ ವಿಷಯದಲ್ಲಿ ಪದವಿ

ಆರ್.ಅಶೋಕ್: 1999ರಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಆರ್.ಆಶೋಕ್, ಈವರೆಗೆ ಸತತ 5 ಚುನಾವಣೆಗಳಲ್ಲಿ ಗೆದ್ದಿದ್ದಾರೆ. 2004ರಲ್ಲಿ ಕುಮಾರಸ್ವಾಮಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಅಶೋಕ್ ಬಿಜೆಪಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಗೃಹ ಮತ್ತು ಸಾರಿಗೆ ಖಾತೆಗಳನ್ನು ನಿರ್ವಹಿಸಿದ್ದಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಉತ್ತರಹಳ್ಳಿ ವಿಧಾನಸಭೆ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತ್ತು. ಆಗ ಅದೇ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದ ಪದ್ಮನಾಭನಗರ ಕ್ಷೇತ್ರವನ್ನು ಆಶೋಕ್ ಆಯ್ಕೆ ಮಾಡಿಕೊಂಡಿದ್ದರು.

ವಯಸ್ಸು: 62, ಜಾತಿ: ಒಕ್ಕಲಿಗ, ಕ್ಷೇತ್ರ: ಪದ್ಮನಾಭನಗರ, ಶಿಕ್ಷಣ: ವಿಜ್ಞಾನ ವಿಷಯದಲ್ಲಿ ಪದವಿ

ಜಗದೀಶ್ ಶೆಟ್ಟರ್: ಹತ್ತು ತಿಂಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಜಗದೀಶ್ ಶೆಟ್ಟರ್, 2005ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು. 2006ರಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾದಾಗ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಕಂದಾಯ ಇಲಾಖೆ ಸಚಿವರಾಗಿ, 2008-09ರ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್ ಅಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ವಯಸ್ಸು: 63, ಜಾತಿ: ಲಿಂಗಾಯತ, ಕ್ಷೇತ್ರ: ಹುಬ್ಬಳ್ಳಿ, ಧಾರವಾಡ ಕೇಂದ್ರ, ಶಿಕ್ಷಣ: ಎಲ್‌ಎಲ್‌ಬಿ

ಬಿ.ಶ್ರೀರಾಮುಲು: 2004ರಿಂದ ಸತತವಾಗಿ ವಿಧಾನಸಭೆಗೆ ಪ್ರವೇಶ ಪಡೆಯುತ್ತಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ 2008, 2011ರ ಉಪಚುನಾವಣೆ ಮತ್ತು 2013ರ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದರು. 2018ರಲ್ಲಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2006ರ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದರು. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು.

ವಯಸ್ಸು: 48, ಜಾತಿ: ವಾಲ್ಮೀಕಿ, ಕ್ಷೇತ್ರ: ಮೊಳಕಾಲ್ಮೂರು, ಶಿಕ್ಷಣ: ಪದವಿ

ಎಸ್.ಸುರೇಶ್ ಕುಮಾರ್: ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುರೇಶ್‌ಕುಮಾರ್, 2008ರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಎರಡು ಬಾರಿ ಬಿಬಿಎಂಪಿ ಸದಸ್ಯರಾಗಿದ್ದರು.

ವಯಸ್ಸು: 63, ಜಾತಿ: ಬ್ರಾಹ್ಮಣ , ಕ್ಷೇತ್ರ: ರಾಜಾಜಿನಗರ, ಶಿಕ್ಷಣ: ವಿಜ್ಞಾನ ವಿಷಯದಲ್ಲಿ ಪದವಿ

ವಿ.ಸೋಮಣ್ಣ: ಮೂಲತಃ ಜನತಾ ಪರಿವಾರದ ಸೋಮಣ್ಣ, 1994ರಿಂದ 2004ರ ವರೆಗೆ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2009ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಸಚಿವರಾದರು.

ವಯಸ್ಸು: 68, ಜಾತಿ: ಲಿಂಗಾಯತ, ಕ್ಷೇತ್ರ: ಗೋವಿಂದರಾಜನಗರ, ಶಿಕ್ಷಣ: ಪದವಿ

ಸಿ.ಟಿ. ರವಿ: 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಗೀರ್ ಅಹ್ಮದ್ ಎದುರು ಕೇವಲ 982 ಮತಗಳ ಅಲ್ಪಅಂತರದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಅವರು, ಬಳಿಕ 4 ಚುನಾವಣೆಗಳಲ್ಲಿ ಸತತ ಗೆಲುವುಗಳನ್ನು ಕಂಡಿದ್ದಾರೆ.

ವಯಸ್ಸು: 52, ಜಾತಿ: ಒಕ್ಕಲಿಗ, ಕ್ಷೇತ್ರ: ಚಿಕ್ಕಮಗಳೂರು, ಶಿಕ್ಷಣ: ಸ್ನಾತಕೋತ್ತರ ಪದವಿ (ಮುಕ್ತ ವಿವಿ)

ಬಸವರಾಜ ಬೊಮ್ಮಾಯಿ: ಬಸವರಾಜ ಬೊಮ್ಮಾಯಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ. 1997ರಲ್ಲಿ ಮುಖ್ಯಮಂತ್ರಿ ಆಗಿದ್ದ ಜೆ.ಎಚ್.ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ. 2008, 2013 ಹಾಗೂ 2018ರಲ್ಲಿ ಶಾಸಕರಾಗಿ ಆಯ್ಕೆ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ನಿರ್ವಹಣೆ.

ವಯಸ್ಸು: 59 ವರ್ಷ, ಜಾತಿ: ಸಾದರ ಲಿಂಗಾಯತ, ಕ್ಷೇತ್ರ: ಶಿಗ್ಗಾವಿ ಸವಣೂರು, ಶಿಕ್ಷಣ: ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ

ಕೋಟ ಶ್ರೀನಿವಾಸ ಪೂಜಾರಿ: ಉಡುಪಿ ಜಿಲ್ಲೆಯ ಕೋಟದ ಬಡ ಕುಟುಂಬದಲ್ಲಿ ಜನಿಸಿದ ಕೋಟ ರಾಜಕೀಯಕ್ಕೆ ಬರುವ ಮುನ್ನ ಛಾಯಾಗ್ರಾಹಕರಾಗಿದ್ದವರು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಹಾಗೂ ಈಚೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.

ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀನಿವಾಸ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಮುಜರಾಯಿ, ಬಂದರು ಹಾಗೂ ಒಳನಾಡು ಖಾತೆಯನ್ನೂ ನಿಭಾಯಿಸಿದ ಅನುಭವವನ್ನು ಹೊಂದಿದ್ದಾರೆ.

ವಯಸ್ಸು: 60, ಜಾತಿ: ಬಿಲ್ಲವ, ಶಿಕ್ಷಣ: 7ನೆ ತರಗತಿ

ಜೆ.ಸಿ ಮಾಧುಸ್ವಾಮಿ: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಿಂದ 1989ರಿಂದ ಈ ವರೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೆ.ಸಿ.ಮಾಧುಸ್ವಾಮಿ ಮೂಲತಃ ಜನತಾ ಪರಿವಾರದವರು.

1989ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು 1994ರ ಚುನಾವಣೆಯಲ್ಲಿ ಸೋತರು. 1997ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಗೆದ್ದಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು. 2013ರಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಮೂಲಕ ಅವರು ಸ್ಪರ್ಧಿಸಿದರೂ ಆ ಚುನಾವಣೆಯಲ್ಲೂ ಸೋಲು ಕಂಡಿದ್ದರು. 2018ರಲ್ಲಿ ಬಿಜೆಪಿ ಸೇರಿ ಚುನಾವಣೆ ಎದುರಿಸಿದ ಅವರು ಗೆಲುವು ಸಾಧಿಸಿದ್ದರು.

ವಯಸ್ಸು: 66, ಜಾತಿ: ಲಿಂಗಾಯತ, ಕ್ಷೇತ್ರ: ಚಿಕ್ಕನಾಯಕನಹಳ್ಳಿ (ತುಮಕೂರು), ಶಿಕ್ಷಣ: ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ

ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ (ಸಿಸಿ ಪಾಟೀಲ್): 2004, 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆ. 2008ರಲ್ಲಿ ಯಡಿಯೂರಪ್ಪ ಸರಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ (2010-2012) ಕಾರ್ಯನಿರ್ವಹಣೆ. 2016ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ.

ವಯಸ್ಸು: 60 , ಜಾತಿ: ಲಿಂಗಾಯತ ಪಂಚಮಸಾಲಿ, ಕ್ಷೇತ್ರ: ನರಗುಂದ(ಗದಗ), ಶಿಕ್ಷಣ: ಪಿಯುಸಿ

ಎಚ್.ನಾಗೇಶ್: 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮುಳಬಾಗಲು ಕ್ಷೇತ್ರಕ್ಕೆ ಟಿಕೆಟ್ ನೀಡಿತ್ತು. ಕ್ಷೇತ್ರದ ಮಟ್ಟಿಗೆ ಪ್ರಬಲರಾಗಿದ್ದ ಮಂಜುನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರದ ಪ್ರಕರಣದಲ್ಲಿ ಚುನಾವಣೆ ಹೊತ್ತಲ್ಲೇ ಉಮೇದುವಾರಿಕೆ ಕಳೆದುಕೊಂಡರು. ಆಗ ಮಂಜುನಾಥ್ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದ ಎಚ್.ನಾಗೇಶ್ ಅವರಿಗೆ ಬೆಂಬಲ ಘೋಷಿಸಿದ್ದರು. ಆ ಚುನಾವಣೆಯಲ್ಲಿ ನಾಗೇಶ್ ಗೆದ್ದರು.

ವಯಸ್ಸು: 60, ಜಾತಿ: ದಲಿತ, ಕ್ಷೇತ್ರ: ಮುಳಬಾಗಿಲು, ಶಿಕ್ಷಣ: 10ನೇ ತರಗತಿ

ಪ್ರಭು ಚವಾಣ್: 2008ರಿಂದ ಈ ವರೆಗೆ ಅವರು ಮೂರು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ವಯಸ್ಸು: 50, ಜಾತಿ: ಪರಿಶಿಷ್ಟ ಜಾತಿ (ಲಂಬಾಣಿ), ಕ್ಷೇತ್ರ: ಔರಾದ್ ಮೀಸಲು, ಶಿಕ್ಷಣ: ಪಿಯುಸಿ

ಶಶಿಕಲಾ ಜೊಲ್ಲೆ: 2008ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2013ರಲ್ಲಿ ಗೆದ್ದ ಬೆಳಗಾವಿ ಜಿಲ್ಲೆಯ ಏಕೈಕ ಶಾಸಕಿ ಎನಿಸಿದ್ದರು. 2018ರ ಚುನಾವಣೆಯಲ್ಲಿ 2ನೆ ಬಾರಿಗೆ ಗೆದ್ದಿದ್ದಾರೆ. ಇದೇ ಮೊದಲಿಗೆ ಸಚಿವ ಸ್ಥಾನ ದೊರೆತಿದೆ. ಇವರ ಪತಿ, ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ.

ವಯಸ್ಸು: 50, ಜಾತಿ: ಲಿಂಗಾಯತ, ಕ್ಷೇತ್ರ: ನಿಪ್ಪಾಣಿ, ಬೆಳಗಾವಿ ಜಿಲ್ಲೆ, ಶಿಕ್ಷಣ: ಎಸೆಸೆಲ್ಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News