ಯಡಿಯೂರಪ್ಪ ನೂತನ ಸಂಪುಟ: 17 ಜಿಲ್ಲೆಗಳು ಪ್ರಾತಿನಿಧ್ಯದಿಂದ ಹೊರಗೆ !

Update: 2019-08-20 12:51 GMT
ಪ್ರಮಾಣ ವಚನ ಸ್ವೀಕರಿಸುತ್ತಿರುವ ಆರ್.ಅಶೋಕ್

ಬೆಂಗಳೂರು, ಆ.20: ಮುಖ್ಯಮಂತ್ರಿ ಯಡಿಯೂರಪ್ಪರ ನೂತನ ಸಚಿವ ಸಂಪುಟದಿಂದ 17 ಜಿಲ್ಲೆಗಳು ಪ್ರಾತಿನಿಧ್ಯದಿಂದ ಹೊರಗುಳಿದಿದ್ದು, ಕೇವಲ 13 ಜಿಲ್ಲೆಗಳಿಗಷ್ಟೇ ಅವಕಾಶ ನೀಡಿದ್ದಾರೆ.

ಬೆಂಗಳೂರು ನಗರಕ್ಕೆ ನಾಲ್ಕು ಸ್ಥಾನಗಳು ಸಿಕ್ಕಿದ್ದು, ಸಿಂಹಪಾಲು ಪಡೆದುಕೊಂಡಿದೆ. ಇನ್ನುಳಿದಂತೆ ಬೆಳಗಾವಿಗೆ ಎರಡು ಹಾಗೂ ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ 1 ಸ್ಥಾನ ನೀಡಲಾಗಿದೆ. ಅಲ್ಲದೆ, ಬಾಗಲಕೋಟೆ, ಕೋಲಾರ, ಉಡುಪಿ, ಗದಗ, ಬೀದರ್, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ಒಂದೊಂದು ಸ್ಥಾನ ಸಿಕ್ಕಿದೆ.

ವಂಚಿತ ಜಿಲ್ಲೆಗಳು: ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಉತ್ತರಕನ್ನಡ, ಬಳ್ಳಾರಿ, ದಾವಣಗೆರೆ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಶಾಸಕರುಗಳಿದ್ದರೂ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನು ಕೋಲಾರದಲ್ಲಿ ಬಿಜೆಪಿ ಶಾಸಕರಿಲ್ಲದೆ ಇದ್ದರೂ ಬಿಜೆಪಿ ಬೆಂಬಲಿಸಿದ ಪಕ್ಷೇತರ ಶಾಸಕ ಎಚ್.ನಾಗೇಶ್‌ಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನುಳಿದಂತೆ ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಸಕರುಗಳು ಇಲ್ಲದೆ ಇರುವುದರಿಂದ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮೊದಲ ಹಂತದಲ್ಲಿ ಯಾವ ಜಿಲ್ಲೆಗಳು ವಂಚಿತವಾಗಿವೆಯೋ ಅಂತಹ ಜಿಲ್ಲೆಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News