ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಹಿಂದೆ ಮೋದಿ, ಶಾ, ಬಿಎಸ್‌ವೈ ಕೈವಾಡ ಸ್ಪಷ್ಟ: ಎಚ್.ಎಸ್.ದೊರೆಸ್ವಾಮಿ

Update: 2019-08-20 14:03 GMT

ಬೆಂಗಳೂರು, ಆ.20: ಹಣ, ಅಧಿಕಾರದ ಸ್ವಾರ್ಥಕ್ಕಾಗಿ ಜನತೆಯ ಆಶೋತ್ತರಗಳಿಗೆ ವಿರುದ್ದವಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ 17 ಶಾಸಕರ ವಿರುದ್ಧ ಜನಾಭಿಪ್ರಾಯ ಮೂಡಿಸುವುದು, ಕೋಮುವಾದಿ ಶಕ್ತಿಗಳ ವಿರುದ್ಧ ಜನಚಳವಳಿ ಕಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂದಿನ ಕಾರ್ಯಕ್ರಮಗಳ ಕುರಿತು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು ಸಂವಾದ ನಡೆಸಿದರು.

ಮಂಗಳವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪ್ರಚಲಿತ ರಾಜ್ಯ ರಾಜಕೀಯ ವ್ಯಾಪಾರೀಕರಣ ಕುರಿತು ಆಯೋಜಿಸಿದ್ದ ಒಂದು ಸಂವಾದ ಕಾರ್ಯಕ್ರಮದಲ್ಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಆಯೋಗ್ಯ ಶಾಸಕರು ಮತ್ತೊಮ್ಮೆ ಗೆಲ್ಲದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಹಾಗೂ ಹಣ, ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡುವ ಯಾವುದೇ ಶಾಸಕರಿಗೆ ಎಚ್ಚರಿಕೆಯ ಸಂದೇಶ ನೀಡಲು ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಹಿಂದಿನ ದಿನಗಳಲ್ಲಿ ದೇಶಕ್ಕಾಗಿ ತಮ್ಮ ಬದುಕ್ಕನ್ನು ಮೀಸಲಿಟ್ಟವರನ್ನು ಜನತೆಯೇ ಹಣ ಹಾಕಿ ಚುನಾವಣೆಯಲ್ಲಿ ಗೆಲ್ಲಿಸುತ್ತಿದ್ದರು. ಆದರೆ, ಇವತ್ತು ಕೋಟ್ಯಾಧೀಶರು ತಮ್ಮ ಆಸ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹಾಗೂ ಅಧಿಕಾರದ ಆಸೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಂತಹವರಿಗೆ ಟಿಕೆಟ್ ನೀಡುತ್ತಿರುವ ಎಲ್ಲ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹಿರಿಯ ಸ್ವಾಂತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿ.ಎಸ್.ಯಡಿಯೂರಪ್ಪರ ಕೈವಾಡ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಅನರ್ಹ ಶಾಸಕರ ಪ್ರಕರಣದಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿವಾದಿಗಳಾಗಿ ಅರ್ಜಿ ಸಲ್ಲಿಸಿ, ಅನರ್ಹ ಶಾಸಕರ ಬಣ್ಣ ಬಯಲು ಮಾಡಬೇಕೆಂದು ಅವರು ಹೇಳಿದರು.

ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸೇರಿಕೊಂಡು ಒಂದು ದೇಶ-ಒಂದು ಪಕ್ಷ, ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆಯನ್ನಾಗಿ ಮಾಡುವತ್ತ ಸಕ್ರಿಯರಾಗಿದ್ದಾರೆ. ಇದನ್ನು ವಿರೋಧಿಸುವವರನ್ನು ಸಿಬಿಐ, ಐಟಿ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಸಲು ನಿರತವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಮಾತನಾಡಿ, ಪಕ್ಷಾಂತರಗೊಳ್ಳುವ ಶಾಸಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಪಕ್ಷಾಂತರ ನಿಷೇಧ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಬಿಜೆಪಿ ಕೋಮುವಾದಿ ಚಿಂತನೆಗಳನ್ನು ಹರಡುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಯುವಕರೇ ಆಗಿದ್ದಾರೆ. ಹೀಗಾಗಿ ಮೊದಲು ಯುವಕರ ನಡುವೆ ವೈಚಾರಿಕಾ, ಪ್ರಗತಿಪರ ಚಿಂತನೆಗಳನ್ನು ತಲುಪಿಸುವಂತಹ ಕೆಲಸ ಮಾಡಬೇಕಾಗಿದೆ. ಬಿಜೆಪಿಗೆ ಪರ್ಯಾಯ ರಾಜಕೀಯಕ್ಕೆ ಯುವಜನರನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ವೇಳೆ ಹಿರಿಯ ಸಾಹಿತಿಗಳಾದ ಮರುಳ ಸಿದ್ಧಪ್ಪ, ಎಸ್.ಜಿ.ಸಿದ್ದರಾಮಯ್ಯ, ಮಾಜಿ ಸಚಿವೆ ಲಲಿತಾ ನಾಯಕ್, ಶ್ರೀರಾಮ್‌ರೆಡ್ಡಿ, ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ, ಕಾಂಗ್ರೆಸ್ ಮುಖಂಡ ಸುದರ್ಶನ್, ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ, ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಯು.ಬಸವರಾಜು, ಮುನೀರ್ ಕಾಟಿಪಳ್ಳ, ಅನಂತ್‌ನಾಯಕ್ ಮತ್ತಿತರರಿದ್ದರು.

ಸದನದ ಒಳಗೆ ಕೇಂದ್ರ ಸರಕಾರದ ಮಸೂದೆಗಳನ್ನು ವಿರೋಧಿಸುವ ಪ್ರಾದೇಶಿಕ ಪಕ್ಷಗಳ ಸಂಸದರ ವಿರುದ್ಧ ಸದನದ ಪಡೆಸಾಲೆಯಲ್ಲೇ ಬಿಜೆಪಿ ಸಂಸದರು ದಬ್ಬಾಳಿಕೆ ನಡೆಸುವುದನ್ನು ಕಣ್ಣಾರೆ ನೋಡಿದ್ದೇನೆ. ಬಿಜೆಪಿ ವಿರುದ್ಧ ಯಾವುದೇ ಪಕ್ಷದ ಸದಸ್ಯರು ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಅವರ ವಿರುದ್ಧ ಸಿಬಿಐ, ಐಟಿ ಇಲಾಖೆಗಳಿಂದ ದಾಳಿ ನಡೆಸಿ ಬೆದರಿಕೆ ಹಾಕಲಾಗುತ್ತಿದೆ.

-ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News