ಕೈ ತಪ್ಪಿದ ಸಚಿವ ಸ್ಥಾನ: ಅತೃಪ್ತ ಶಾಸಕರಿಂದ ಗೌಪ್ಯ ಸಭೆ

Update: 2019-08-20 14:12 GMT

ಬೆಂಗಳೂರು, ಆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ಮೊದಲ ಸಚಿವ ಸಂಪುಟ ರಚನೆ ಬೆನ್ನಲ್ಲೆ, ಬಿಜೆಪಿ ನಾಯಕರ ನಡುವೆ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಕೈತಪ್ಪಿದ್ದ ಹಿನ್ನೆಲೆ ಕೆಲ ಶಾಸಕರು ಗೌಪ್ಯ ಸಭೆ ನಡೆಸಿದ್ದು, ಹಲವೆಡೆ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕರಾದ ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ರಾಮದಾಸ್, ಶಿವನಗೌಡ ನಾಯಕ್, ಕೆ.ಜಿ.ಬೋಪಯ್ಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಗೈರು ಎದ್ದು ಕಾಣುತಿತ್ತು.

ಸಭೆ: ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ, ಅವರಿಗೆ ಯಾವುದೇ ಸ್ಥಾನ ಸಿಗಲಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಅತೃಪ್ತರು ಸಭೆ ಮಾಡಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದರ ಭಾಗವಾಗಿಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಕೆಲ ಹಿರಿಯ ಶಾಸಕರು ಸಭೆ ನಡೆಸಿದರು.

ಪ್ರತಿಭಟನೆ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗರು, ಚಿತ್ರದುರ್ಗದಲ್ಲಿ ಬೈಕಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ ಘಟನೆ ಮಂಗಳವಾರ ನಡೆಯಿತು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಿದರು.

17 ಜನ ಸಚಿವರು ಮಂಗಳವಾರ ಪ್ರಮಾಣ ವಚನ ಸ್ವೀಕಾರ ಮಾಡಿದರಾದರೂ 13 ಜಿಲ್ಲೆಗಳಿಗಷ್ಟೇ ಪ್ರಾತಿನಿಧ್ಯ ಲಭಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ನಾಲ್ವರು ಸಚಿವರು ದೊರಕಿದ್ದರೆ, ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿಗೆ ಎರಡು ಸಚಿವ ಸ್ಥಾನ ನೀಡಲಾಗಿದೆ.

ಹಿರಿತನ ಪರಿಗಣಿಸದ್ದು ಬೇಸರ

ಹಿರಿತನ, ಪಕ್ಷನಿಷ್ಠೆ ಗುರುತಿಸಿ ಮಂತ್ರಿಗಿರಿ ನೀಡದ್ದಕ್ಕೆ ಬೇಸರವಾಗಿದೆ. ಭ್ರಮನಿರಸನ ಆಗಿದೆ. ಕೆಲ ಶಾಸಕರು ಬೆಂಗಳೂರಿನಲ್ಲಿ ಸೇರಿ ಚರ್ಚಿಸುತ್ತೇವೆ. ಬಿಎಸ್‌ವೈ ಮತ್ತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತೇವೆ.

-ತಿಪ್ಪಾರೆಡ್ಡಿ, ಸಚಿವ ಸ್ಥಾನ ಆಕಾಂಕ್ಷಿ

ಅನುಮಾನವಿತ್ತು

ಮೂಲತಃ ನಾನು ಶಿವಮೊಗ್ಗ ಜಿಲ್ಲೆಯವನಾಗಿದ್ದಕ್ಕೆ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ನಮ್ಮ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ನಾಯಕರುಗಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಿರಿಯ ನಾಯಕ ಈಶ್ವರಪ್ಪಇದ್ದಾರೆ. ಹೀಗಾಗಿ ನಮಗೆ ಸಚಿವ ಸ್ಥಾನ ಸಿಗುವುದು ಅನುಮಾನ ಇತ್ತು.

-ಹರತಾಳು ಹಾಲಪ್ಪ, ಬಿಜೆಪಿ ಶಾಸಕ

ಸಿದ್ಧಾಂತಕ್ಕೆ ಬೆಲೆ ಇಲ್ಲ

ನಾನು ಮೊದಲಿನಿಂದಲೂ ತತ್ವ, ಸಿದ್ಧಾಂತವನ್ನು ನಂಬಿಕೊಂಡು ರಾಜಕಾರಣ ಮಾಡುತ್ತಬಂದಿದ್ದೇನೆ. ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲದಂತಾದರೆ, ಏನು ಮಾಡಲು ಸಾಧ್ಯವಿಲ್ಲ. ಹಾಗಂತ ನಾನು ತತ್ವ ಸಿದ್ಧಾಂತ ಬಿಡುವ ಮನುಷ್ಯನಲ್ಲ.

-ಎಸ್.ಅಂಗಾರ, ಸಚಿವ ಸ್ಥಾನ ಆಕಾಂಕ್ಷಿ

6.10ಕ್ಕೆ ಹೆಸರು ಕೈಬಿಟ್ಟರು

ಮಂಗಳವಾರ ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ, 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ನಾನು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಶಾಸಕನಾಗಿ, ಮಂತ್ರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ. ಈ ಬಾರಿ ಕೂಡ ಮಂತ್ರಿ ಆಗಬೇಕೆಂಬ ಆಸೆ ಇತ್ತು. ಆದರೆ ಅರ್ಧ ಸಂಪುಟ ವಿಸ್ತರಣೆ ಮಾಡಿದ್ದಾರೆ, ಈಗ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಇನ್ನು ಅರ್ಧ ಸಂಪುಟ ವಿಸ್ತರಣೆ ಮಾಡಬೇಕಿದ್ದು, ಕಾದು ನೋಡಬೇಕಿದೆ.

-ಉಮೇಶ್ ಕತ್ತಿ, ಸಚಿವ ಸ್ಥಾನ ಆಕಾಂಕ್ಷಿ

ಇಂದಲ್ಲ, ನಾಳೆ ನಾನು ಮಂತ್ರಿ

ಮಾಧ್ಯಮಗಳಲ್ಲಿ ಸಚಿವ ಸ್ಥಾನದಲ್ಲಿ ನನ್ನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಬಲಿಗರು ಬೆಂಗಳೂರಿಗೆ ಬಂದಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಎಂದು ಮುಖ್ಯಮಂತ್ರಿ ಬಳಿ ಕೇಳಿಲ್ಲ. ಸಚಿವ ಸ್ಥಾನ ನೀಡಿದರೆ ನಿರ್ವಹಿಸಲು ಸಿದ್ಧ. ಅಲ್ಲದೆ, ಇಂದಲ್ಲ, ನಾಳೆ ನಾನು ಮಂತ್ರಿ ಆಗುತ್ತೇನೆ.

-ಬಾಲಚಂದ್ರ ಜಾರಕಿಹೊಳಿ, ಸಚಿವ ಸ್ಥಾನ ಆಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News