ಜಮ್ಮುಕಾಶ್ಮೀರದಲ್ಲಿ ಆರೋಗ್ಯ ಸೇವೆಗೆ ತಡೆ: 18 ವೈದ್ಯರ ಆರೋಪ

Update: 2019-08-20 16:07 GMT

ಕಾಶ್ಮೀರ, ಆ. 20: ಆಗಸ್ಟ್ 5ರಿಂದ ಭದ್ರತಾ ನಿರ್ಬಂಧ ವಿಧಿಸಲಾಗಿದ್ದ ಜಮ್ಮು ಹಾಗೂ ಕಾಶ್ಮೀರದಲ್ಲಿನ ಪರಿಸ್ಥಿತಿ ಅಲ್ಲಿನ ಜನರು ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಅಡ್ಡಿ ಉಂಟು ಮಾಡಿದೆ ಎಂದು ದೇಶಾದ್ಯಂತ 18 ವೈದ್ಯರು ಹೇಳಿದ್ದಾರೆ.

ಆಗಸ್ಟ್ 16ರಂದು ವೈದ್ಯಕೀಯ ಜರ್ನಲ್ ಬಿಎಂಜೆಯಲ್ಲಿ ಪ್ರಕಟವಾದ ಪತ್ರದಲ್ಲಿ ವೈದ್ಯರು ಈ ಹೇಳಿಕೆ ನೀಡಿದ್ದಾರೆ.

ವಿವಿಧ ಸುದ್ದಿ ವರದಿಗಳು ಶ್ರೀನಗರ ಕಠಿಣ ನಿರ್ಬಂಧದ ಚಿತ್ರಣ ನೀಡುತ್ತಿದೆ. ರೋಗಗ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಇಲ್ಲಿನ ಜನರಿಗೆ ಸಾಧ್ಯವಾಗುತ್ತಿಲ್ಲ. ಅವರು ಖಾಸಗಿ ವಾಹನದಲ್ಲಿ ರೋಗಿಗಳನ್ನು ಕೊಂಡೊಯ್ಯಬೇಕಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಗುರುತು ಪರಿಶೀಲಿಸಲು ಹಾಗೂ ವಿಚಾರಣೆ ನಡೆಸಲು ತಡೆ ಬೇಲಿಯ ಎದುರು ನಿಂತ ಭದ್ರತಾ ಪಡೆಗಳ ಸಿಬ್ಬಂದಿ ಈ ವಾಹನವನ್ನು ಪ್ರತಿ ನಿಮಿಷಕ್ಕೊಮ್ಮೆ ನಿಲ್ಲಿಸುತ್ತಿದ್ದಾರೆ. ಪೆಲೆಟ್ ಗುಂಡಿನಿಂದ ಗಾಯಗೊಂಡ ಹಲವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

 ರಾಜ್ಯದಲ್ಲಿ ಆರೋಗ್ಯದ ಹಾಗೂ ಬದುಕುವ ಹಕ್ಕನ್ನು ನಿರ್ದಯವಾಗಿ ನಿರಾಕರಿಸಲಾಗುತ್ತಿದೆ ಎಂದು ಪತ್ರ ಪ್ರತಿಪಾದಿಸಿದೆ.

ಸಂವಹನ ಹಾಗೂ ಪ್ರಯಾಣ ನಿರ್ಬಂಧವನ್ನು ಆದಷ್ಟು ಬೇಗ ಹಿಂಪಡೆಯಬೇಕು ಎಂದು ಪತ್ರದಲ್ಲಿ ವೈದ್ಯರು ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News