25 ಬಿಜೆಪಿ ಸಂಸದರನ್ನು ಕಳುಹಿಸಿದ ರಾಜ್ಯಕ್ಕೆ ಪ್ರಧಾನಿಯ ಕೊಡುಗೆ ಏನು: ಪ್ರೊ.ಕೆ.ಎಸ್.ಭಗವಾನ್ ಪ್ರಶ್ನೆ

Update: 2019-08-20 17:02 GMT

ಮೈಸೂರು, ಆ.20: ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಕಳುಹಿಸಿದ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಪ್ರಶ್ನಿಸಿದರು.

ಕಾಯಕ ಸಮಾಜದ ವತಿಯಿಂದ ನಗರದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 104 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು.

ರಾಜ್ಯ ಪ್ರವಾಹದಿಂದ ತತ್ತರಿಸಿ ಹೋಗಿದೆ. ಜನ ಜಾನುವಾರುಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಅತೀವೃಷ್ಠಿಯಿಂದ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂಧಿಸಿ ಹೆಚ್ಚಿನ ನೆರವು ನೀಡಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಹರಿಹಾಯ್ದರು.

ನಾನು ಯಾವುದೇ ಸರಕಾರವನ್ನು ವಿರೋಧ ಮಾಡಲು ವಿರೋಧ ಪಕ್ಷದವನಲ್ಲ, ಸರಿ ಇದ್ದರೆ ಸರಿ ಎಂದು ಹೇಳುತ್ತೇನೆ. ಸರಿಯಿಲ್ಲದಿದ್ದರೆ ಸರಿ ಇಲ್ಲ ಎಂದು ಹೇಳುತ್ತೇನೆ. ಆರ್ಟಿಕಲ್ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ಧುಪಡಿಸಿದಾಗ ಅದನ್ನು ಸ್ವಾಗತಿಸಿದೆ. ಅದೇ ರೀತಿ ತಪ್ಪು ಮಾಡಿದರೆ ಅದನ್ನು ಸಹ ಪ್ರಶ್ನೆ ಮಾಡುತ್ತೇನೆ. ನಾನು ಯಾವ ಮುಲಾಜಿಗೂ ಒಳಗಾಗುವವನಲ್ಲ ಎಂದು ಹೇಳಿದರು.

ರಾಜ್ಯದಿಂದ 25 ಬಿಜೆಪಿ ಸಂಸದರನ್ನು ನೀಡಲಾಗಿದೆ. ಇಂತಹ ಸಂದರ್ಭಲ್ಲಿ ಪ್ರಧಾನಿ ಮೋದಿ ಹೆಚ್ಚಿನ ಗಮನ ಹರಿಸಿ ರಾಜ್ಯಕ್ಕೆ ಹಚ್ಚು ಅನುದಾನ ನೀಡಬೇಕಿತ್ತು. ಆದರೆ ಅವರು ಅನುದಾನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸು, ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಗುರುನಂಜಯ್ಯ, ಕುಮಾರ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News