ಮೈಸೂರಿಗೆ ದಕ್ಕದ ಮಂತ್ರಿ ಸ್ಥಾನ: ಸ್ಥಳೀಯರ ಆಸೆಗೆ ತಣ್ಣೀರೆರಚಿದ ಯಡಿಯೂರಪ್ಪ

Update: 2019-08-20 17:18 GMT

ಮೈಸೂರು,ಆ.20: ಬಹುನಿರೀಕ್ಷಿತ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮೈಸೂರು ಭಾಗಕ್ಕೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ಇದೀಗ ಹುಸಿಯಾಗಿದೆ.

ಕರ್ನಾಟಕದಲ್ಲಿ ಯಾವುದೇ ಹೊಸ ಸರಕಾರ ಅಧಿಕಾರಕ್ಕೆ ಬಂದರೂ  ಮೈಸೂರು ಭಾಗಕ್ಕೆ ಮೊದಲ ಪ್ರಾಶಸ್ತ್ಯದಲ್ಲೇ ಸಚಿವ ಸ್ಥಾನ ನೀಡುವುದು ಹಿಂದಿನಿಂದಲೂ ಸರ್ವೆ ಸಾಮಾನ್ಯವಾಗಿದೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅದು ವಿರುದ್ಧವಾಗಿದೆ. ಈ ಹಿಂದೆ 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಮೊದಲ ಅವಧಿಯಲ್ಲಿ ಸಚಿವ ಸ್ಥಾನ ನೀಡಿರಲಿಲ್ಲ, ನಂತರದ ದಿನಗಳಲ್ಲಷ್ಟೇ ಶಾಸಕ ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.

ಇದೀಗ ಅದು ಮತ್ತೊಮ್ಮೆ ಮರುಕಳಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೊದಲ ಅವಧಿಯಲ್ಲೇ ಸಚಿವ ಸ್ಥಾನ ದೊರಕದಿರುವುದು ಜಿಲ್ಲೆಯ ಜನರಿಗೆ ಬೇಸರ ತರಿಸಿದೆ.

ರಾಜ್ಯ ರಾಜಕಾರಣದಲ್ಲಿ ಘಟಾನುಘಟಿ ರಾಜಕಾರಣಿಗಳನ್ನು ನೀಡಿರುವ ಜಿಲ್ಲೆ ಮೈಸೂರು. ಬೆಂಗಳೂರು ಬಿಟ್ಟರೆ ಮೈಸೂರೇ ದೊಡ್ಡ ನಗರ ಎಂಬ ಕೀರ್ತಿಯನ್ನು ಹೊಂದಿದೆ. ಜೊತೆಗೆ ಪಾರಂಪರಿಕ ನಗರಿ, ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎಂಬ ಬಿರುದನ್ನು ಪಡೆದಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಕೂಡ ಪ್ರಸಿದ್ಧಿ. ಇಂತಹ ಸಂದರ್ಭದಲ್ಲಿ ಮೈಸೂರಿನ ಅಭಿವೃದ್ದಿ ದೃಷ್ಟಿಯಿಂದ ಸ್ಥಳೀಯರೊಬ್ಬರಿಗೆ ಸಚಿವ ಸ್ಥಾನ ನೀಡಬಹುದಿತ್ತು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಪ್ರವಾಹ ಭೀತಿಯಿಂದ ಜಿಲ್ಲೆ ತತ್ತರಿಸಿ ಹೋಗಿದೆ. ಸಾಕಷ್ಟು ಜನ ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ನಿಲ್ಲಬೇಕಾದದ್ದು ರಾಜ್ಯ ಸರಕಾರದ ಕರ್ತವ್ಯ. ಇಂತಹ ಸಂದರ್ಭದಲ್ಲಿ ಸ್ಥಳೀಯ ಶಾಸಕರೊಬ್ಬರನ್ನು ಸಚಿವರನ್ನಾಗಿ ಮಾಡಿ ಪ್ರವಾಹ ಭೀತಿಯನ್ನು ಸಮರ್ಥವಾಗಿ ಎದುರಿಸಲು ಅವಕಾಶ ಕಲ್ಪಿಸಬಹುದಿತ್ತು. ಆದರೆ ಜಿಲ್ಲೆಯ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದಿರುವುದು ಒಂದು ರೀತಿಯಲ್ಲಿ ಹಿನ್ನಡೆಯುಂಟಾಗಲು ಕಾರಣವಾಗಿದೆ.

ಪ್ರವಾಹ ಭೀತಿ ಒಂದು ಕಡೆಯಾದರೆ ವಿಶ್ವವಿಖ್ಯಾ ಮೈಸೂರು ದಸರಾ ಬೇರೆ ಸಮೀಪದಲ್ಲೇ ಇದೆ. ಈ ವೇಳೆ ಸ್ಥಳೀಯ ಜನಪ್ರತಿನಿಧಿಯಾದವರಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟು ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕಿತ್ತು. ಆದರೆ ಯಡಿಯೂರಪ್ಪ ಅದನ್ನು ಹುಸಿಗೊಳಿಸಿ ಸ್ಥಳೀಯ ಬಿಜೆಪಿ ಶಾಸಕರ ಅಸಮಧಾನಕ್ಕೆ ಕಾರಣರಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು ಮೂವರು ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಮೈಸೂರು ನಗರದ ಕೆ.ಆರ.ಕ್ಷೇತ್ರದಿಂದ ರಾಮದಾಸ್ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಾಮರಾಜ ಕ್ಷೇತ್ರದಿಂದ ಎಲ್.ನಾಗೇಂದ್ರ ಮತ್ತು ನಂಜನಗೂಡು ಕ್ಷೇತ್ರದಿಂದ ಹರ್ಷವರ್ಧನ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೂವರಲ್ಲಿ ಯಾರಿಗಾದರೂ ಸಚಿವ ಸ್ಥಾನ ಸಿಗಬಹುದೆಂಬ ಅಸೆಗೆ ತಣ್ಣೀರೆರಚಲಾಗಿದೆ.

Writer - ನೇರಳೆ ಸತೀಶ್‍ ಕುಮಾರ್

contributor

Editor - ನೇರಳೆ ಸತೀಶ್‍ ಕುಮಾರ್

contributor

Similar News