ಎರಡನೇ ಬಾರಿ ಸಿಟಿ ರವಿಗೆ ಸಚಿವ ಸ್ಥಾನ: ಆಕಾಂಕ್ಷಿಯಾಗಿದ್ದ ಎಂ.ಪಿ.ಕುಮಾರಸ್ವಾಮಿಗೆ ಅಸಮಾಧಾನ

Update: 2019-08-20 18:04 GMT

ಚಿಕ್ಕಮಗಳೂರು, ಆ.20: ನಾಲ್ಕನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕ ಸಿಟಿ ರವಿ ಅವರು ಸಿಎಂ ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ವೇಳೆಯೂ ಯಡಿಯೂರಪ್ಪ ಅವರು ಶಾಸಕ ಸಿ.ಟಿ.ರವಿ ಅವರನ್ನು ಮಂತ್ರಿ ಮಾಡಿ ಶಿಕ್ಷಣ ಮಂತ್ರಿಯನ್ನಾಗಿ ಮಾಡಿದ್ದರು. ಇದೀಗ ಅವರು ಮತ್ತೊಮ್ಮೆ ಸಚಿವರಾಗಿ ಆಯ್ಕೆಯಾಗುವ ಮೂಲಕ ಎರಡನೇ ಬಾರಿಗೆ ಸಚಿವರಾಗುವ ಅದೃಷ್ಟಗಳಿಸಿದಂತಾಗಿದೆ.

ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಸಿ.ಟಿ.ರವಿ ಆರಂಭದಲ್ಲಿ ಬಾಬಾ ಬುಡನ್‍ಗಿರಿ ಹೋರಾಟದ ಮೂಲಕ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟವರು. ಉತ್ತಮ ಸಂಘಟಕ, ವಾಗ್ಮಿ ಎಂದೇ ಖ್ಯಾತಿ ಪಡೆದಿರುವ ರವಿ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ಗಮನ ಸೆಳೆದವರಾಗಿದ್ದಾರೆ. ಆರಂಭದ ಚುನಾವಣೆಗಳಲ್ಲಿ ಸತತ ಸೋಲುಂಡ ಬಳಿಕ ಶಾಸಕರಾಗಿ ಆಯ್ಕೆಗೊಂಡ ಅವರು ಸತತವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ವೇಳೆ ಸಿ.ಟಿ.ರವಿ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಂದಾಗಿ ಶಿಕ್ಷಣ ಸಚಿವರಾಗಿ ನೇಮಕಗೊಂಡಿದ್ದರು. ನಂತರ ಯಡಿಯೂರಪ್ಪ ಕೆಜೆಪಿ ಸೇರಿದ್ದ ಅವಧಿಯಲ್ಲಿ ಸಿಟಿ ರವಿ ಹಾಗೂ ಯಡಿಯೂರಪ್ಪ ಅವರ ನಡುವೆ ಭಾರೀ ವಾಕ್ಸಮರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸಿಟಿ ರವಿ ಅವರಿಗೆ ಮಂತ್ರಿಗಿರಿ ಸಿಗುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದ್ದಾರೂ ಸಿಟಿ ರವಿ ರಾಷ್ಟಮಟ್ಟದಲ್ಲಿ ಪ್ರಭಾವ ಹೊಂದಿರುವ ಕಾರಣಕ್ಕೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಸಾಧ್ಯವಾಗಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಸಿಟಿ ರವಿ ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದರೂ ಕ್ಷೇತ್ರದ ಜ್ವಲಂತ ಸಮಸ್ಯೆಗಳು ಪರಿಹಾರ ಕಂಡಿಲ್ಲ. ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಸಿಕ್ಕಿಲ್ಲ, ಜಿಲ್ಲಾಸ್ಪತ್ರೆ ಅಭಿವೃದ್ಧಿ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ದಾಖಲೆಗಳಲ್ಲೇ ಉಳಿದಿವೆ. ಚಿಕ್ಕಮಗಳೂರು ನಗರದ ರಸ್ತೆಗಳ ಪಾಡು ಪ್ರಯಾಣಿಕರು, ವಾಹನ ಚಾಲಕರಿಗೆ ನರಕಯಾತನೆಯಾಗಿ ಮಾರ್ಪಟ್ಟಿದೆ. ನಗರಸಭೆಯಿಂದ ಕೈಗೊಂಡಿರುವ ಶಾಶ್ವತ ಕುಡಿಯುವ ನೀರಿನ ಯೋಜನೆ, ಒಳಚರಂಡಿ ವ್ಯವಸ್ಥೆಗಳು ಇಂದಿಗೂ ಸಮಸ್ಯೆಗಳನ್ನು ಹೊದ್ದು ಮಲಗಿದ್ದು, ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಿಟಿ ರವಿ ಸಾರ್ವಜನಿಕರು, ಹೋರಾಟಗಾರರಿಂದ ಸದಾ ಟೀಕೆಗೊಳಗಾಗುತ್ತಿದ್ದರು. ಇದೀಗ ಸಚಿವರಾಗಿ ಆಯ್ಕೆಗೊಂಡಿರುವ ಅವರು ಈ ಸಮಸ್ಯೆಗಳನ್ನು ಇನ್ನಾದರೂ ಬಗೆಹರಿಸಲಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಗೆದ್ದಿದ್ದ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಜೀವರಾಜ್ ಅವರು ಮಾತ್ರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಟಿ.ಡಿ.ರಾಜೇಗೌಡ ಎದುರು ಒಂದೂವರೆ ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಸದ್ಯ ಜಿಲ್ಲೆಯ ನಾಲ್ವರು ಶಾಸಕರ ಪೈಕಿ ಕಡೂರಿನಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಬೆಳ್ಳಿ ಪ್ರಕಾಶ್ ಹೊರತು ಪಡಿಸಿ, ಮೂರನೇ ಬಾರಿಗೆ ತರೀಕೆರೆ ಶಾಸಕರಾಗಿ ಆಯ್ಕೆಯಾಗಿರುವ ಡಿ.ಎಸ್.ಸುರೇಶ್, ಮೂಡಿಗೆರೆ ಕ್ಷೇತ್ರದ ಎಂ.ಪಿ.ಕುಮಾರಸ್ವಾಮಿ ಅವರು ಸ್ಥಾನದ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಎಂ.ಪಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ಆಪ್ತರಾಗಿದ್ದು, ದಲಿತರಾಗಿರುವ ಅವರು ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದರು. ಆದರೆ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದು, ಈ ಸಂಬಂಧ ಅಸಮಾಧಾನಗೊಂಡು, ಪ್ರಮಾಣ ವಚನ ಸಮಾರಂಭ ಮುಗಿಯುವ ಮೊದಲೇ ಮಂಗಳವಾರ ತರಾತುರಿಯಲ್ಲಿ ಬೆಂಗಳೂರಿನಿಂದ ಹೊರಟು ಮೂಡಿಗೆರೆ ಆಗಮಿಸಿದ್ದಾರೆಂದು ಹೇಳಲಾಗುತ್ತಿದೆ. ಸಚಿವ ಸ್ಥಾನ ಸಿಗದಿದ್ದರಿಂದ ಅಸಮಾಧಾನಗೊಂಡಿರುವ ಕುಮಾರಸ್ವಾಮಿ ಅವರ ಮುಂದಿನ ನಡೆ ಏನೆಂಬುದು ನಿಗೂಢವಾಗಿದ್ದರೆ, ತರೀಕೆರೆ ಶಾಸಕ ಸುರೇಶ್ ಮೌನಕ್ಕೆ ಶರಣಾಗಿದ್ದಾರೆನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News