ಬಿಜೆಪಿ ಭದ್ರಕೋಟೆ ದಾವಣಗೆರೆ ಜಿಲ್ಲೆಗೆ ಈ ಬಾರಿಯೂ ಇಲ್ಲ ಸಚಿವ ಸಂಪುಟದಲ್ಲಿ ಸ್ಥಾನ !

Update: 2019-08-20 18:09 GMT

ದಾವಣಗೆರೆ, ಆ.20: ಜಿಲ್ಲೆಯ 7 ಕ್ಷೇತ್ರಗಳಲ್ಲಿ ಐವರು ಶಾಸಕರು, ಓರ್ವ ಸಂಸದ ಇರುವ ಮೂಲಕ ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ದೊರಕದಿರುವುದು ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನವುಂಟು ಮಾಡಿದೆ. 

ಐವರು ಶಾಸಕರಿರುವ ದಾವಣಗೆರೆ ಜಿಲ್ಲೆಗೆ ಈ ಬಾರಿಯಾದರೂ ಸಚಿವ ಸ್ಥಾನ ದೊರೆಯುವ ವಿಶ್ವಾಸ ಶಾಸಕರಲ್ಲಿಯೂ ಇತ್ತು. ಅದರೆ, ದಾವಣಗೆರೆಗೆ ಪ್ರಾತಿನಿಧ್ಯ ದೊರಕದೆ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. 

ಒಟ್ಟು ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದವು, ಅದರಲ್ಲಿ 6 ಕ್ಷೇತ್ರಗಳನ್ನು ಬಿಜೆಪಿ ತನ್ನ ವಶಕ್ಕೆ ಪಡೆದಿತ್ತು. ಹರಪಹನಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದ್ದರಿಂದ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಬಿಜೆಪಿ ವಶದಲ್ಲಿದೆ. ಉತ್ತರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ, ರೇಣುಕಾಚಾರ್ಯ ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಚನ್ನಗಿರಿಯ ಮಾಡಾಳ ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಪ್ರೋ. ಲಿಂಗಣ್ಣ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಪಕ್ಷ ನಿಷ್ಠರಾಗಿರುವ ಹಿರಿಯ ಶಾಸಕ ರವೀಂದ್ರನಾಥ ಅವರಿಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸವಿತ್ತು. ಅಲ್ಲದೇ ಬಿ.ಎಸ್.ಯಡಿಯೂರಪ್ಪ ಅವರ ಅಪ್ತ ರೇಣುಕಾಚಾರ್ಯ ಅವರು ಸಚಿವರಾಗಲು ತೀವ್ರ ಪೈಪೋಟಿ ನಡೆಸಿದ್ದರು. ಅದರೆ ದಾವಣಗೆರೆ ಜಿಲ್ಲೆಯನ್ನು ಕಡೆಗಣಿಸಿರುವುದು ಸಹಜವಾಗಿ ಕಾರ್ಯಕರ್ತರು ಮತ್ತು ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. 

ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನ, ಇಬ್ಬರಿಗೆ ನಿಗಮ ಮಂಡಳಿ ಸ್ಥಾನ, ಒಬ್ಬರಿಗೆ ಮುಖ್ಯಸಚೇತಕ ಸ್ಥಾನ ನೀಡಲಾಗಿತ್ತು. ಅದರೆ ಈ ಬಾರಿ ಜಿಲ್ಲೆಯ ಯಾವುದೇ ಶಾಸಕರಿಗೂ ಅವಕಾಶ ನೀಡದೆ ದಾವಣಗೆರೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. 

ಮೈತ್ರಿ ಸರಕಾರದಲ್ಲೂ ದೊರೆಯದ ಸಚಿವ ಸ್ಥಾನ 
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಇಬ್ಬರೂ ಶಾಸಕರಿದ್ದರೂ ಸಚಿವ ಸ್ಥಾನ ನೀಡದೆ ತುಮಕೂರಿನ ಶ್ರೀನಿವಾಸ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಮೈತ್ರಿ ಅವಧಿಯಲ್ಲೂ ಸಚಿವ ಸ್ಥಾನ ಸಿಗದೆ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದ್ದವು. ಈಗ ಮತ್ತೆ ಅದೇ ನಿರ್ಮಾಣವಾಗಿದ್ದು , ಜಿಲ್ಲೆಯನ್ನು ಬೇರೆ ಜಿಲ್ಲೆಯ ಸಚಿವರು ಉಸ್ತುವಾರಿ ವಹಿಸಿಕೊಡುವ ಸಾಧ್ಯತೆಯಿದೆ. 

ಜಿಲ್ಲೆಯ ಏಳು ಕ್ಷೇತ್ರ ಗಳಲ್ಲಿ ಐದು ಜನ ಶಾಸಕರು ಬಿಜೆಪಿಯವರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತತ ನಾಲ್ಕನೇ ಸಲ ಗೆದ್ದಿದ್ದಾರೆ. ಜಿಲ್ಲೆಯ ಯಾವುದೇ ಶಾಸಕರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು. ನೀಡದಿರುವುದನ್ನು ನಾನು ಪ್ರತಿಭಟಿಸುತ್ತೇನೆ.
-ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ ವಿರುಪಾಕ್ಷಪ್ಪ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News