ಮನುಷ್ಯ ಸಂಬಂಧಗಳ ಸಂಘರ್ಷವನ್ನು ಹೇಳುವ ‘ಪ್ರಾಪ್ತಿ’

Update: 2019-08-20 18:36 GMT

‘ನನ್ನ ನೆಚ್ಚಿನ ಗುಡ್‌ವಿನ್’, ‘ಅದ್ಭುತ ಕನಸುಗಾರ ಚಾಣಕ್ಯ’ ಮತ್ತು ‘ಅಂಡಮಾನ್ ಆಳ ಅಗೆದಷ್ಟೂ ಕರಾಳ’ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ಓ. ಆರ್. ಪ್ರಕಾಶ್ ಅವರ ಸ್ವತಂತ್ರ ಕಾದಂಬರಿ ‘ಪ್ರಾಪ್ತಿ’.

ಕೆ. ಟಿ. ಗಟ್ಟಿಯವರು ಈ ಕಾದಂಬರಿಯ ಕುರಿತಂತೆ ಬೆನ್ನುಡಿಯಲ್ಲಿ ಬರೆಯುತ್ತಾ ‘‘ಪ್ರಾಪ್ತಿಯನ್ನು ಓದಿದಾಗ, ಅವರು ಕಂಡು ಅರಸಿದ ಪಾತ್ರಗಳು ನನ್ನ ಸುತ್ತಮುತ್ತ ಓಡಾಡುತ್ತಿವೆ ಎಂದೆನಿಸಿತು. ಆ ಪಾತ್ರಗಳ ಬದುಕಿನ ಬಹಳ ಭಾಗ ನನಗೆ ಕಾಣಿಸಿತು. ಆ ಪಾತ್ರಗಳ ಜೀವಂತಿಕೆ ನನ್ನ ಮನ ಮುಟ್ಟಿತು. ಸುಂದರವಾದ ಚಿತ್ರಣ, ಅಷ್ಟೇ ಸುಂದರವಾದ ಭಾಷೆ...’’ ಎಂದು ಅಭಿಪ್ರಾಯ ಪಡುತ್ತಾರೆ. ನಾ. ಡಿಸೋಜ ಅವರು ಮುನ್ನುಡಿಯಲ್ಲಿ ‘‘ಕಾದಂಬರಿಯ ಒಂದು ವಿಶೇಷತೆ ಅಂದರೆ ಅದು ಚಕಚಕನೆ ಸಾಗುತ್ತದೆ. ಯಾವ ಯಾವ ಕಾಲಕ್ಕೆ ಏನೇನು ಸಿದ್ಧವಾಗಿರಬೇಕೋ ಅದೆಲ್ಲ ಸಿದ್ಧವಾಗಿ ಬಂದು ಕತೆ ಒಂದು ವೇಗವನ್ನು ಪಡೆದು ಮುಂದೆ ಸಾಗಿ ಮುಕ್ತಾಯವಾಗುತ್ತದೆ. ಪಾತ್ರ ಸೃಷ್ಟಿ, ಸಂಭಾಷಣೆ, ಘಟನೆಗಳು ಹೇಳಿ ಮಾಡಿಸಿದಂತೆ ಬರುತ್ತವೆ. ಉತ್ತಮ ಶೈಲಿ ಇದೆ. ಭಾಷೆ ಸರಳವಾಗಿದೆ....’’

ಕಾದಂಬರಿ ಪೂರ್ವಸಿದ್ಧವಾಗಿರುವ ಕತೆಯನ್ನು ಹೊಂದಿದೆ. ಅಂದರೆ, ಈ ದಾರಿಯಲ್ಲಿ ಹೋಗಿ ಆ ದಾರಿಯಲ್ಲಿ ಮುಗಿಯಬೇಕು ಎಂದು ನಿರ್ಧರಿಸಿದಂತೆ. ತಂದೆ-ತಾಯಿ ಮತ್ತು ಮಗು ಇವರ ಭಾವನೆಗಳನ್ನು ಕೇಂದ್ರವಾಗಿಟ್ಟು ಕಾದಂಬರಿಯನ್ನು ಹೆಣೆಯಲಾಗಿದೆ. ಮನುಷ್ಯ ಸಂಬಂಧಗಳ ಘನತೆಯನ್ನು ಕಾದಂಬರಿ ಎತ್ತಿಹಿಡಿಯುತ್ತದೆ. ರಾಮ್‌ಪ್ರಸಾದ್ ಮತ್ತು ಶುಭ ದಂಪತಿಗೆ ಮಕ್ಕಳಿರುವುದಿಲ್ಲ. ಅವರು ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೆ ಹರ್ಷ ಎಂದು ನಾಮಕರಣ ಮಾಡುತ್ತಾರೆ. ಈ ಹರ್ಷ ಅವರ ಬದುಕಿನಲ್ಲಿ ಕೇವಲ ಹರ್ಷವನ್ನಷ್ಟೇ ತರುವುದಿಲ್ಲ. ಒಂದು ನಿರ್ಣಾಯಕ ಘಟ್ಟದಲ್ಲಿ ದಂಪತಿ ಮತ್ತು ಮಗುವಿನ ನಡುವಿನ ಸಂಬಂಧ ನಿಕಷಕ್ಕೊಡ್ಡುತ್ತದೆ. ಮಗು ಬೆಳೆದು ವಿದ್ಯಾರ್ಥಿ ಕಾಲಘಟ್ಟದಲ್ಲಿ ತನ್ನ ಕಿಡ್ನಿಯನ್ನು ಕಳೆದುಕೊಳ್ಳುತ್ತದೆ. ಮಗುವಿಗೆ ಕೃತಕ ಕಿಡ್ನಿಯನ್ನು ಜೋಡಿಸಬೇಕು. ಈ ಸಂದರ್ಭದಲ್ಲಿ ಎದುರಾಗುವ ಸಂಘರ್ಷ, ಹರ್ಷನ ನಿಜ ತಂದೆಗಾಗಿ ಹುಡುಕಾಟ ಇವೆಲ್ಲವುಗಳ ಜೊತೆಗೆ ಕಾದಂಬರಿ ಬೆಳೆಯುತ್ತದೆ. ಮೊದಲೇ ನಿಶ್ಚಯಿಸಿದಂತೆ, ಕಾದಂಬರಿ ಸುಖಾಂತವಾಗುತ್ತದೆ. ಕಾದಂಬರಿಯ ಕಥಾವಸ್ತುವಿಗೆ ಪೂರಕವಾಗಿರುವ ಅಪಾರ ಮಾಹಿತಿಗಳನ್ನೂ ಲೇಖಕರು ಸಂಗ್ರಹಿಸಿದ್ದಾರೆ. ಕ್ರೀಡೆಯ ನಿಯಮಾವಳಿಗಳು, ಗರ್ಭಧಾರಣೆ, ದತ್ತಕ ಪ್ರಕ್ರಿಯೆ, ಜೀನ್ಸ್ ಗುಣ ಸ್ವಭಾವಗಳು ಇವುಗಳನ್ನೆಲ್ಲ ಕಲೆ ಹಾಕಿ, ಕಾದಂಬರಿಗೆ ಪೂರಕವಾಗಿಸಿದ್ದಾರೆ. ಸಾಧಾರಣವಾಗಿ ಸೃಜನಶೀಲ ಕಾದಂಬರಿಕಾರರು ಒಳ ಅನ್ವೇಷಣೆಗೆ ನೀಡುವ ಆದ್ಯತೆಯನ್ನು, ಹೊರ ಮಾಹಿತಿ ಕಲೆ ಹಾಕಲು ನೀಡುವುದಿಲ್ಲ. ಪ್ರಾಪ್ತಿ ಜನಪ್ರಿಯ ಓದುವಿಕೆಗೆ ಅತ್ಯುತ್ತಮ ಕೊಡುಗೆಯಾಗಿದೆ.

ಬೆನಕ ಬುಕ್ಸ್ ಬ್ಯಾಂಕ್, ಶಿವಮೊಗ್ಗ ಇವರು ಹೊರತಂದಿರುವ ಕೃತಿಯ ಪುಟಗಳು 190. ಮುಖಬೆಲೆ 120 ರೂಪಾಯಿ. ಆಸಕ್ತರು 73384 37666 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News