ಕೈ ತಪ್ಪಿದ ಸಚಿವ ಸ್ಥಾನ: ಬಿಜೆಪಿಯಲ್ಲಿ ಅಸಮಾಧಾನದ ಬೇಗುದಿ

Update: 2019-08-21 12:44 GMT
ರೇಣುಕಾಚಾರ್ಯ, ಉಮೇಶ್ ಕತ್ತಿ, ರಾಜುಗೌಡ

ಬೆಂಗಳೂರು, ಆ. 21: ‘ಮುಂದಿನ ಸಂಪುಟ ವಿಸ್ತರಣೆ ಒಳಗೆ ನನಗೆ ಮಂತ್ರಿ ಸ್ಥಾನ ಸಿಗದಿದ್ದರೆ ನನ್ನ ಕಡೆ ಮನೆ ಕಡೆಗೆ’ ಎಂದು ಒಬ್ಬ ಶಾಸಕ ಬೆದರಿಕೆ ಹಾಕಿದರೆ, ಮತ್ತೋರ್ವ ಶಾಸಕ ‘ಸ್ವಾಭಿಮಾನಕ್ಕೆ ದಕ್ಕೆಯಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂಬ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನೂತನ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ ಆಕಾಂಕ್ಷಿ ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ವರಿಷ್ಠರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆವೊಡ್ಡುತ್ತಿರುವುದು ಸಿಎಂ ಬಿಎಸ್‌ವೈಗೆ ತಲೆನೋವು ತಂದಿದೆ.

ಮನೆಕಡೆಗೆ: ‘ಮುಂದಿನ ಸಚಿವ ಸಂಪುಟ ವಿಸ್ತರಣೆ ಒಳಗೆ ನನಗೆ ಮಂತ್ರಿ ಸ್ಥಾನ ಸಿಗದಿದ್ದರೆ ನನ್ನ ಕಡೆ ಮನೆ ಕಡೆಗೆ’ ಎಂದು ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ, ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಆ ಮೂಲಕ ತನ್ನ ಅಸಮಾಧಾನ ಹೊರಹಾಕಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತನ್ನ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದೇ ವೇಳೆ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಉಮೇಶ್ ಕತ್ತಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮರಳಿ ಮನೆಗೆ(ಜೆಡಿಎಸ್) ಬರುವಂತೆ ಹೊರಟ್ಟಿ ಆಹ್ವಾನಿಸಿದ್ದಾರೆಂದು ಹೇಳಲಾಗಿದೆ.

ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಉಮೇಶ್ ಕತ್ತಿ, ಬದಲಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡ ಉಮೇಶ್ ಕತ್ತಿಯವರನ್ನು ಜೆಡಿಎಸ್ ಆಹ್ವಾನಿಸಿ ಕುತೂಹಲ ಸೃಷ್ಟಿಸಿದೆ.

ರಾಜೀನಾಮೆ: ‘ಚುನಾವಣೆಯಲ್ಲಿ ಸೋತ ವ್ಯಕ್ತಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಬೇಸರವಿದೆ. ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ, ಇದನ್ನು ನಾನು ಬಹಿರಂಗವಾಗಿ ಹೇಳುತ್ತೇನೆ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಬಿಎಸ್‌ವೈ ಆಪ್ತ, ಶಾಸಕ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗೆದ್ದವರಿಗೆ ಸಚಿವ ಸ್ಥಾನ ಕೊಡುವುದನ್ನು ಬಿಟ್ಟು ಸೋತವರಿಗೇಕೆ ನೀಡಿದ್ದಾರೆ. ಈಗ ಬಂದು ನಾಟಕ ಮಾಡುವುದು ನನಗೆ ಇಷ್ಟವಿಲ್ಲ. ಹಲವು ಮಂದಿ ಆಯ್ಕೆಯಾಗಿದ್ದಾರೆ. ಬೆಳಗಾವಿಯ ಹಿರಿಯ ನಾಯಕ ಉಮೇಶ್ ಕತ್ತಿಗೆ ಸ್ಥಾನ ಕೊಡಬಹುದಿತ್ತು. ಆದರೆ, ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಬೇಸರ ತಂದಿದೆ ಎಂದರು.

ಶಾಸಕರಾಗಿ ಆಯ್ಕೆಯಾದವರಿಗೆ ಸ್ಥಾನ ನೀಡಿದರೆ ಗೌರವ ಇರುತಿತ್ತು. ನಾನು ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ. ನಾನು ಯಾರನ್ನೂ ಭೇಟಿಯಾಗಿಲ್ಲ, ನನ್ನ ಕೊನೆಯ ಉಸಿರು ಇರುವವರೆಗೂ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡುವುದಿಲ್ಲ ಎಂದರು.

ಸಿಎಂ ಬಿಎಸ್‌ವೈ ರಾಜಕೀಯದಲ್ಲಿ ಇರುವವರೆಗೆ ನಾನೂ ಇರುತ್ತೇನೆ. ನಾನು ಅವರ ಮನೆಯ ಮಗ. ಕೊನೆಯ ಉಸಿರು ಇರುವವರೆಗೂ ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಸಚಿವ ಸ್ಥಾನ ಕೊಡಲಿ, ಕೊಡದಿರಲಿ ನಾನು ಬಿಸ್‌ವೈ ಜೊತೆಗೆ ಇರುತ್ತೇನೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಕೆಲವರಿಗೆ ಅಸಮಾಧಾನ ಇರುವುದು ನಿಜ. ಯಾವುದೇ ಗೌಪ್ಯ ಸಭೆ ಮಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ನೋ ಬಾಲ್‌ಗೆ ರನ್ ಔಟ್: ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಪಕ್ಷ-ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಆದರೆ, ಕೊನೆಯ ಗಳಿಕೆಯಲ್ಲಿ ಸ್ಥಾನ ಕೈತಪ್ಪಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.

ಬುಧವಾರ ಡಾಲರ್ಸ್‌ ಕಾಲನಿಯಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸಂಪುಟ ಸೇರ್ಪಡೆಯಾದವರಿಗೆ ಮತ್ತು ನನಗೆ ಸ್ಥಾನ ತಪ್ಪಿಸಿದವರೆ ಒಳ್ಳೆಯದಾಗಲಿ. ಬೇಸರವೇನೆಂದರೆ ನೋ ಬಾಲ್‌ಗೆ ನಾನು ರನ್ ಓಟ್ ಆಗಿದ್ದೀನಿ ಎಂದು ವಿಶ್ಲೇಷಿಸಿದರು.

ನಾನೊಬ್ಬ ಕ್ರೀಡಾಪಟು. ನಾನು ಇನ್ನೂ ಚಿಕ್ಕವನು, ಮುಂದೆ ಆಟದಲ್ಲಿ ಮತ್ತೆ ಗೆಲ್ಲುತ್ತೇನೆ. ನನಗೆ ಬೇಸರವೇನಿಲ್ಲ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ 15-16 ಶಾಸಕರು ಆಯ್ಕೆಯಾಗಿದ್ದೇವೆ. ಇನ್ನೂ ಮೂರ್ನಾಲ್ಕು ಶಾಸಕರಿಗೆ ಸ್ಥಾನ ನೀಡಬೇಕಿತ್ತು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆ ಹೊಂದಿಲ್ಲ.

ರಾಜ್ಯದಲ್ಲಿ ಅತ್ಯಂತ ಪ್ರಬಲವಾಗಿರುವ ಮತ್ತು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿವಿರುವ ವಾಲ್ಮೀಕಿ ಸಮುದಾಯಕ್ಕೆ ಇನ್ನೂ ಎರಡು ಸಚಿವ ಸ್ಥಾನ ಸಿಗಬೇಕಿತ್ತು. ಜತೆಗೆ ನಮ್ಮ ಸಮುದಾಯಕ್ಕೆ ಶೇ.7.5 ಮೀಸಲಾತಿ ಕಲ್ಪಿಸಿದರೆ ಅಷ್ಟೇ ಸಾಕು ಎಂದು ರಾಜುಗೌಡ ಹೇಳಿದರು.

‘ಸರಕಾರದಲ್ಲಿ ಅಸಮಾಧಾನಗಳು ಸಹಜ. ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಸಬೇಕು. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಮತ-ಒಳಜಗಳ ಇಲ್ಲ. ಅಸಮಾಧಾನಗೊಂಡಿದ್ದ ಕೆಲವರನ್ನು ನಾನೇ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವೆಲ್ಲವೂ ಮುಗಿದ ಅಧ್ಯಾಯ’

-ಯಡಿಯೂರಪ್ಪ ಮುಖ್ಯಮಂತ್ರಿ

ಬಯಸದೆ ಬಂದ ಭಾಗ್ಯ: ‘ಮಾಜಿ ಶಾಸಕನಾದರೂ ನನ್ನ ಮೇಲೆ ನಂಬಿಕೆ ಇಟ್ಟು ಕೇಂದ್ರ ನಾಯಕರು ಸಚಿವ ಸ್ಥಾನ ನೀಡಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವ ಯತ್ನ ಮಾಡುತ್ತೇನೆ. ಅಥಣಿ, ಕಾಗವಾಡ ಉಪ ಚುನಾವಣೆ ಜವಾಬ್ದಾರಿ ಬಗ್ಗೆ ಪಕ್ಷದ ಕಾರ್ಯಕರ್ತನಾಗಿ ಎಲ್ಲೆ ಚುನಾವಣೆ ನಡೆದರೂ ಕೆಲಸ ಮಾಡುತ್ತೇನೆ. ಇದು ನನಗೆ ಬಯಸದೆ ಬಂದ ಭಾಗ್ಯ. ಈಗ ಯಾವುದೇ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಹಿರಿಯ ಶಾಸಕ ಕತ್ತಿಗೆ ಅಸಮಾಧಾನವಾಗಿರುವುದು ಸಹಜ, ಇದು ಪಕ್ಷದ ನಿರ್ಧಾರ. ಇದರ ಬಗ್ಗೆ ನನಗೆನು ಗೊತ್ತಿಲ್ಲ. ನನ್ನ ಪರ ಯಾರು ಲಾಬಿ ಮಾಡಿದರೂ ಅದು ಗೊತ್ತಿಲ್ಲ. ಮಧ್ಯರಾತ್ರಿ 2 ಗಂಟೆಗೆ ನೀವು ಸಚಿವರಾಗುತ್ತಿರಿ ಎಂದು ವರಿಷ್ಠರು ಸೂಚನೆ ನೀಡಿದ್ದರು’

-ಲಕ್ಷ್ಮಣ ಸವದಿ, ನೂತನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News