ವೈದ್ಯ ವಿಜ್ಞಾನಿಗಳ ಪ್ರಾಥಮಿಕ ವಿವರಗಳು

Update: 2019-08-21 18:30 GMT

 ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಸರಳಗನ್ನಡದಲ್ಲಿ ಓದುಗರಿಗೆ ದಾಟಿಸುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ವಿದ್ಯಾರ್ಥಿಗಳನ್ನು, ಅಧ್ಯಯನ ಶೀಲರನ್ನು ಗುರಿಯಾಗಿಟ್ಟುಕೊಂಡು ವಿಜ್ಞಾನಕ್ಕೆ ಸಂಬಂಧಿಸಿದ ಬರಹಗಳು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಇದೇ ಸಂದರ್ಭದಲ್ಲಿ ವೈದ್ಯ ವಿಜ್ಞಾನವನ್ನು ಪ್ರತ್ಯೇಕವಾಗಿ ಗುರುತಿಸುವ ಕೆಲಸವೂ ನಡೆಯಬೇಕಾಗಿದೆ. ಆಧುನಿಕ ಜಗತ್ತು ಆರೋಗ್ಯದ ಕಡೆಗೆ ಮುನ್ನಡೆಯುತ್ತಿದ್ದರೆ ಅದರ ಹಿಂದೆ ಅಪಾರ ವೈದ್ಯಕೀಯ ವಿಜ್ಞಾನಿಗಳ ಕೊಡುಗೆಗಳಿವೆ. ಅವರನ್ನು ನಾವು ತಿಳಿದುಕೊಳ್ಳುವುದೆಂದರೆ ನಮ್ಮನ್ನು ನಾವು ತಿಳಿದು ಕೊಂಡಂತೆ. ಡಾ. ಎಚ್. ಡಿ. ಚಂದ್ರಪ್ಪ ಗೌಡ ಹಾಗೂ ಡಾ. ನಾ. ಸೋಮೇಶ್ವರ ಅವರು ಜಂಟಿಯಾಗಿ ನಿರೂಪಿಸಿರುವ ‘ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು-ಅವರ ಸಂಶೋಧನೆಗಳು’ ವಿದ್ಯಾರ್ಥಿಗಳು ಮತ್ತು ವಿಜ್ಞಾನಾಸಕ್ತರಿಗೆ ಪ್ರಾಥಮಿಕ ವಿವರಗಳನ್ನು ನೀಡಬಲ್ಲ ಕೃತಿಯಾಗಿದೆ. ನಲವತ್ತೊಂದು ಆಯ್ದ ವೈದ್ಯ ವಿಜ್ಞಾನಿಗಳ ಜೀವನ ಮತ್ತು ಕಾರ್ಯಸಾಧನೆಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. ವಿಜ್ಞಾನದ ಕುರಿತಂತೆ ಆಸಕ್ತಿಯನ್ನು ಬಿತ್ತುವ ಕೆಲಸವನ್ನು ಕೃತಿ ಮಾಡುತ್ತದೆ.
  
 ಪ್ರಾಚೀನ ವಿಜ್ಞಾನಿಗಳಿಂದ ಹಿಡಿದು ಆಧುನಿಕ ವಿಜ್ಞಾನಿಗಳವರೆಗೆ ಪ್ರಾಥಮಿಕ ವಿವರಗಳು ಇಲ್ಲಿವೆ. ಕ್ರಿಸ್ತಪೂರ್ವ ಕಾಲದಲ್ಲಿ ಬಾಳಿದ ಸುಶ್ರುತ, ಹಿಪಾಕ್ರಟಿಸ್, ಚರಕ ಅಲ್ಲದೆ, ಕ್ರಿಸ್ತಶಕದಲ್ಲಿ ಬಾಳಿದ ಪ್ಯಾರಾಸೆಲ್ಸಸ್, ಅಂಬ್ರೋಯಿಸ್ ಪಾರೆ, ಆಂಡ್ರಿಯಾಸ್ ವೆಸೇಲಿಯಸ್, ವಿಲಿಯಂ ಹಾರ್ವೆ, ಎಡ್ವರ್ಡ್ ಚೆನ್ನರ್ ಮೊದಲಾದ ಹಿರಿಯ ವಿಜ್ಞಾನಿಗಳ ವಿವರಗಳೂ ಇಲ್ಲಿವೆ. ಈ ಮೂಲಕ ವಿಜ್ಞಾನ ಹೇಗೆ ಜಾಗತಿಕವಾಗಿ ಹಂತಹಂತವಾಗಿ ಬೆಳೆದು ಬಂತು ಎನ್ನುವುದನ್ನೂ ನಾವು ಪರಿಚಯ ಮಾಡಿಕೊಳ್ಳಬಹುದಾಗಿದೆ. ಶಸ್ತ್ರ ಚಿಕಿತ್ಸೆಯ ಪಿತಾಮಹ ಎಂದು ಗುರುತಿಸಲ್ಪಟ್ಟ ಸುಶ್ರುತ ನಾಸಿಕ ಸುರೂಪಿಕ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ಎನ್ನುವ ವಿವರಗಳನ್ನು ಈ ಕೃತಿ ಹೇಳುತ್ತದೆ. ಕ್ರಿ. ಪೂ. 470ರಲ್ಲಿ ಬಾಳಿದ ಹಿಪೋಕ್ರೆಟಿಸ್ ಆಧುನಿಕ ವೈದ್ಯ ಪದ್ಧತಿಯ ಪಿತಾಮಹ ಎಂದು ಗುರುತಿಸಲ್ಪಟ್ಟವನು. ಸುಮಾರು 90 ವರ್ಷಗಳ ಕಾಲ ಬದುಕಿದ್ದ ಈತ ಗ್ರೀಕ್ ದೇಶದ ಹೆಸರಾಂತ ತತ್ವಜ್ಞಾನಿಗಳಾದ ಅರಿಸ್ಟಾಟಲ್ ಮತ್ತು ಪ್ಲೇಟೋ ಅವರ ಸಮಕಾಲೀನನೂ ಆಗಿದ್ದ. ಚರಕ ಸಂಹಿತೆಯ ಕುರಿತಂತೆಯೂ ಈ ಕೃತಿ ಸರಳ ವಿವರಗಳನ್ನು ನೀಡುತ್ತದೆ. ಪೆನಿಸಿಲಿನ್ ಪ್ರವರ್ತಕ ಅಲೆಕ್ಸಾಂಡರ್ ಫ್ಲೆಮಿಂಗ್, ಇನ್ಸುಲಿನ್ ಸಂಶೋಧಕ ಫ್ರೆಡರಿಕ್ ಬ್ಯಾಂಟಿಂಗ್, ಸ್ನಾಯು ಸಂಕುಚನ ಕ್ರಿಯೆಯ ಸಂಶೋಧಕ ಯಲ್ಲಾಪ್ರಗಡ ಸುಬ್ಬರಾವ್, ಕಾರ್ಡಿಯಕ್ ಕೆಥೀಟರೈಸೇಶನಂ ಪ್ರವರ್ತಕ ವರ್ನರ್ ಪಾರ್ಸ್‌ಮನ್....ಹೀಗೆ ಹಲವು ಮಹತ್ವದ ವೈದ್ಯ ವಿಜ್ಞಾನಿಗಳ ಪರಿಚಯ ನಮಗಾಗುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 152. ಮುಖಬೆಲೆ 140 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News