ಕಾನೂನು ಸರಿಯಾಗಿ ಪಾಲನೆಯಾಗಲಿ

Update: 2019-08-21 18:35 GMT

ಮಾನ್ಯರೇ,

ಇತ್ತೀಚೆಗೆ ಮೋಟಾರು ವಾಹನ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದು ಇದರಲ್ಲಿ ಕೆಲವು ಉತ್ತಮ ಅಂಶಗಳು ಸೇರಿಕೊಂಡಿವೆ. ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಮೊತ್ತವನ್ನು ಏರಿಸಿರುವುದು, ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿ ಅಪಘಾತವೆಸಗಿದರೆ ಮಕ್ಕಳಿಗೆ ಶಿಕ್ಷೆ, ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರುವ ನಾಗರಿಕರಿಗೆ ತೊಂದರೆಕೊಡದಿರುವುದು ಮತ್ತು ಅಪಘಾತ ನಡೆದರೆ ಕ್ಯಾಶ್‌ಲೆಸ್ ಚಿಕಿತ್ಸೆ ಇತ್ಯಾದಿ ಕ್ರಮಗಳು ಗಮನಾರ್ಹ.
ನಮ್ಮಲ್ಲಿ ಅದರಲ್ಲೂ ಯುವಜನರಲ್ಲಿ ಅನೇಕರು ಲೈಸೆನ್ಸ್ ರಹಿತ ಚಾಲನೆ, ವಯೋಮಿತಿಯೊಳಗಿನ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತವೆಸಗಿ ಯಾವುದೇ ತಪ್ಪೆಸಗದ ವಾಹನ ಸವಾರರನ್ನು ಅಥವಾ ಪಾದಚಾರಿಗಳನ್ನು ಕೊಲ್ಲುವುದು ಸಾಮಾನ್ಯವಾಗುತ್ತಿದೆ. ಕೆಲವು ಯುವಕರಂತೂ ತಮ್ಮ ದ್ವಿಚಕ್ರ ವಾಹನಗಳಲ್ಲಿ ಹೆಲ್ಮಟ್ ಧರಿಸದೆ 3-4 ಜನರನ್ನು ಕೂರಿಸಿಕೊಂಡು ಸುತ್ತಾಡುವುದನ್ನು ಇಂದಿಗೂ ಕಾಣುತ್ತಿದ್ದೇವೆ. ಮೊಬೈಲ್‌ಫೋನ್ ಹಿಡಿದು ಮಾತಾಡಿಕೊಳ್ಳುತ್ತಾ ವಾಹನ ಚಲಾಯಿಸುವುದು, ಕರ್ಕಶ ವಾರ್ನ್ ಹಾಕುತ್ತಾ ವಾಹನ ಚಲಾಯಿಸುವುದನ್ನು ಇಂದಿಗೂ ನಿಯಂತ್ರಿಸಲಾಗುತ್ತಿಲ್ಲ.
ಈಗ ದಂಡದ ಮೊತ್ತದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದರಿಂದ, ಹಲವು ಭ್ರಷ್ಟ ಪೊಲೀಸರು ಪ್ರಕರಣ ದಾಖಲಿಸದೆ, ರಶೀದಿ ನೀಡದೆ ತಾವೇ ಒಂದಿಷ್ಟು ಹಣ ವಸೂಲಿ ಮಾಡಿ ಕಳಿಸುವ ಸಾಧ್ಯತೆ ಹೆಚ್ಚಿದೆ. ಕೆಲವು ನಗರಗಳಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ಪತ್ತೆಯಾಗಿದ್ದು, ಅದರ ವೀಡಿಯೊಗಳು ಎಲ್ಲೆಡೆ ಹರಡಿವೆ.
ಕಾನೂನು ರೂಪಿಸಿದರೆ ಮಾತ್ರ ಸಾಲದು, ಅದರ ಪಾಲನೆ ಯಾಗಬೇಕು. ಪಾಲನೆ ಮಾಡಬೇಕಾದವರೇ ಕಳ್ಳದಾರಿ ಹಿಡಿದರೆ ಎಷ್ಟು ಕಠಿಣ ಕಾನೂನುಗಳಿದ್ದರೂ ಏನು ಪ್ರಯೋಜನ?
 

Writer - -ಜೆ. ಎಫ್. ಡಿ'ಸೋಜ, ಅತ್ತಾವರ

contributor

Editor - -ಜೆ. ಎಫ್. ಡಿ'ಸೋಜ, ಅತ್ತಾವರ

contributor

Similar News