ಚಿದಂಬರಂ ಕಾಲೆಳೆಯಲು ಹೋಗಿ ಮಂಗಳಾರತಿ ಮಾಡಿಸಿಕೊಂಡ ಸಿಟಿ ರವಿ

Update: 2019-08-22 07:27 GMT

ಬೆಂಗಳೂರು: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಯಡಿಯೂರಪ್ಪ ಸರಕಾರದಲ್ಲಿ ಹೊಸದಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿಟಿ ರವಿ ಬುಧವಾರ ಸಿಬಿಐನಿಂದ ಬಂಧನಕ್ಕೊಳಗಾದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಟ್ವೀಟ್ ಮೂಲಕ ಕಾಲೆಳೆಯಲು ಹೋಗಿ ಟ್ವಿಟರಿಗರಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ.

ಚಿದಂಬರಂ ಬಂಧನವಾಗುವುದಕ್ಕಿಂತ ಮುನ್ನ ಟ್ವೀಟ್ ಮಾಡಿದ ರವಿ, ಚಿದಂಬರಂ ಅವರು ಅನುಕುಂಪ ಗಿಟ್ಟಿಸಲು ಹಾಗೂ ಸಿಬಿಐ ಮತ್ತು ಇಡಿಯಿಂದ ಬಂಧನ ತಪ್ಪಿಸಲು ದಿಲ್ಲಿಯ ತಮ್ಮ ನಿವಾಸದಲ್ಲಿ ಅಡಗಿಕೊಂಡಿದ್ದಾರೆ ಎಂದು ಬರೆದಿದ್ದರು.

"ಕೇಂದ್ರ ಗೃಹ ಸಚಿವರಾಗಿದ್ದಾಗ 'ಹಿಂದು ಉಗ್ರವಾದ' ಪದವನ್ನು ಆವಿಷ್ಕರಿಸಿದ ಠಕ್ಕ ಈಗ ಕಳ್ಳನಂತೆ ಅಡಗಿಕೊಂಡಿದ್ದಾರೆ,'' ಎಂದು ರವಿ ಟ್ವೀಟ್ ಮಾಡಿದ್ದರು. ಆದರೆ ಸಿ ಟಿ ರವಿಯ ಟ್ವೀಟ್ ಗಳನ್ನು ಟ್ವಿಟರಿಗರು ಅಷೊಂದು ಲಘುವಾಗಿ ಪರಿಗಣಿಸದೆ ಅವರಿಗೆ ಮಂಗಳಾರತಿ ಎತ್ತಿಯೇ ಬಿಟ್ಟಿದ್ದಾರೆ.

ಸಚಿವರಾಗಿ ನಿಮ್ಮ ಜವಾಬ್ದಾರಿಯತ್ತ ಗಮನ ನೀಡಿ, ಇಂತಹ ವಿವಾದಗಳಲ್ಲಿ ತಲೆ ಹಾಕಬೇಡಿ ಎಂದು ಕೆಲವರು ರವಿಗೆ ಸಲಹೆ ನೀಡಿದರೆ ಇನ್ನು ಕೆಲವರು  ಎರಡು ಜನರನ್ನು ಬಲಿ ಪಡೆದ ಅವರ ಕಾರು ಶಾಮೀಲಾಗಿದ್ದ ಹಿಟ್ ಎಂಡ್ ರನ್ ಪ್ರಕರಣವನ್ನು ನೆನಪಿಸಿ ಅವರ ವಿರುದ್ಧ ಬಾಕಿಯಿರುವ ಪ್ರಕರಣಗಳನ್ನು ನೆನಪಿಸಿದ್ದಾರೆ.

ಒಬ್ಬ ಟ್ವಿಟರಿಗರು ರವಿಯನ್ನೇ 'ಠಕ್ಕ' ಎಂದಿದ್ದಾರಲ್ಲದೆ ರಾಜ್ಯ ಸಚಿವರೊಬ್ಬರು ಬಿಜೆಪಿ ಐಟಿ ಸೆಲ್ ನ ಟ್ರೋಲ್ ನಂತೆ ವರ್ತಿಸುತ್ತಿದ್ದಾರೆಂದಿದ್ದಾರೆ.

ಒಬ್ಬರಂತೂ "ಸರ್ ಇಂತಹ ಒಂದು ಟ್ವೀಟ್ ಅಗತ್ಯವಿದೆಯೇ? ಅದು ನಿಮ್ಮ ಕೆಲಸದ ಭಾಗವೇ ? ಅದು ಬಿಜೆಪಿ ಹೈಕಮಾಂಡ್ ಕೆಲಸವಲ್ಲವೇ ? ಇಂತಹ ಅನಗತ್ಯ ರಾಷ್ಟ್ರೀಯ ವಿಚಾರಗಳಿಂದ ದೂರವಿರಿ. ನಿಮ್ಮ ಜಿಲ್ಲೆ ಹಾಗೂ ಸಚಿವಾಲಯದ ಕೆಲಸದತ್ತ ಗಮನ ನೀಡಿ. ಸಾವಿರಾರು ಜನರು ಮೂಡಿಗೆರೆಯಲ್ಲಿ ಪರಿಹಾರ ಶಿಬಿರಗಳಲ್ಲಿದ್ದಾರೆ, ಅವರ ಸಮಸ್ಯೆ ಪರಿಹರಿಸಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News