ಸಿಎಂ ಬಿಎಸ್‌ವೈ ಭೇಟಿ ಮಾಡಿದ ಕಾಂಗ್ರೆಸ್ ಶಾಸಕ ಭೀಮಾನಾಯ್ಕೆ

Update: 2019-08-22 12:52 GMT

ಬೆಂಗಳೂರು, ಆ. 22: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.

ಗುರುವಾರ ಡಾಲರ್ಸ್‌ ಕಾಲನಿಯಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಭೀಮಾನಾಯ್ಕೆ, ಕ್ಷೇತ್ರದ ವಿಚಾರ ಹಾಗೂ ಮುಂದೂಡಿಕೆಯಾಗಿದ್ದ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ದ ಅಧ್ಯಕ್ಷರ ಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಭೇಟಿ ಮಾಡಿದ್ದರು ಎಂದು ಗೊತ್ತಾಗಿದೆ.

ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಭೀಮಾನಾಯ್ಕ, ಕೆಎಂಎಫ್ ಅಧ್ಯಕ್ಷರ ಚುನಾವಣೆ, ಸಿಎಂ ಪರಿಹಾರ ನಿಧಿಗೆ ಚೆಕ್ ನೀಡುವುದು ಹಾಗೂ ಕ್ಷೇತ್ರದ ಜನರಿಗೆ ಸಿಎಂ ವೈದ್ಯಕೀಯ ನೆರವು ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಭೇಟಿ ಮಾಡಿದ್ದು ಚರ್ಚಿಸಿದ್ದೇನೆ.

ಈ ಹಿಂದೆ ನಡೆಯಬೇಕಿದ್ದ ಕೆಎಂಎಫ್ ಚುನಾವಣೆಯನ್ನು ಕೆಲವು ಕಾರಣಗಳಿಂದ ಮುಂದೂಡಲಾಗಿತ್ತು. ಸಹಕಾರ ಇಲಾಖೆ ಅಧಿಕಾರಿಗಳು ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿದ್ದೇನೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News