ತಪ್ಪಿದ ಸಚಿವ ಸ್ಥಾನ: ಲಿಂಬಾವಳಿ ಬೆಂಬಲಿಗರಿಂದ ಸಿಎಂ ನಿವಾಸಕ್ಕೆ ಮುತ್ತಿಗೆ

Update: 2019-08-22 14:12 GMT

ಬೆಂಗಳೂರು, ಆ. 22: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿ ಮೂರು ದಿನಗಳು ಕಳೆದರೂ ಸಚಿವ ಸ್ಥಾನ ವಂಚಿತರ ಅಸಮಾಧಾನ ನಿಂತಿಲ್ಲ. ಅರವಿಂದ ಲಿಂಬಾವಳಿ ಬೆಂಬಲಿಗರು ಬಿಎಸ್‌ವೈ ನಿವಾಸಕ್ಕೆ ಮುತ್ತಿಗೆ ಹಾಕಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದೆಡೆ ಹಿರಿಯ ಶಾಸಕ ಉಮೇಶ್ ಕತ್ತಿ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಅನರ್ಹ ಶಾಸಕರು ‘ಬಿಜೆಪಿಯಿಂದ ನಮಗೆ ಖಚಿತ ಭರವಸೆ ಸಿಕ್ಕಿಲ್ಲ’ ಎಂದು ದಿಲ್ಲಿಯಲ್ಲಿ ಬೀಡುಬಿಟ್ಟಿರುವುದು ಕುತೂಹಲ ಸೃಷ್ಟಿಸಿದೆ.

ಬೀದಿಗಿಳಿದ ಬಂಟರು, ಭೋವಿ ಸಮುದಾಯ: ಸಂಪುಟದಲ್ಲಿ ಬಂಟ, ಭೋವಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿ ಸಮುದಾಯದ ಸಂಘಟನೆಗಳ ಪ್ರತಿನಿಧಿಗಳು ಬೀದಿಗೆ ಇಳಿದಿದ್ದು, ಬಿಎಸ್‌ವೈ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಧಿಕ್ಕಾರದ ಘೋಷಣೆ: ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿದ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಬೆಂಬಲಿಗರು, ಸಂಪುಟದಲ್ಲಿ ಭೋವಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಲಿಂಬಾವಳಿ, ಎಸ್.ರಘು, ಗೂಳಿಹಟ್ಟಿ ಶೇಖರ್ ಸೇರಿದಂತೆ ನಾಲ್ಕು ಮಂದಿ ಭೋವಿ ಸಮುದಾಯದ ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ, ಸಂಪುಟದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಸಮುದಾಯ ಶ್ರಮಿಸಿದೆ. ಸಮುದಾಯಕ್ಕೆ ಸಚಿವ ಸ್ಥಾನ ನೀಡದಿದ್ದರೆ 4 ಮಂದಿ ಶಾಸಕರಿಗೂ ರಾಜೀನಾಮೆ ನೀಡಲು ಮನವಿ ಮಾಡುತ್ತೇವೆ. ಸಮುದಾಯಕ್ಕೆ ಅನ್ಯಾಯವಾದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಭೋವಿ ಸಮುದಾಯದ ಮುಖಂಡರು, ಸಿಎಂಗೆ ಎಚ್ಚರಿಕೆಯನ್ನು ನೀಡಿದರು.

ಮುಖಂಡರ ಮನವೊಲಿಕೆಗೆ ಬಿಜೆಪಿ ಮುಖಂಡರು ಹಾಗೂ ಬಿಎಸ್‌ವೈ ಆಪ್ತರು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆ ಬಳಿಕ ಮುಖಂಡರೊಂದಿಗೆ ಬಿಎಸ್‌ವೈ ಚರ್ಚಿಸಿದ್ದು, ಸಮುದಾಯಕ್ಕೆ ಸಂಪುಟ ವಿಸ್ತರಣೆ ವೇಳೆ ಪ್ರಾತಿನಿಧ್ಯ ಕಲ್ಪಿಸುವ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದಾರೆಂದು ಗೊತ್ತಾಗಿದೆ.

ಸಿದ್ದರಾಮಯ್ಯ ನನ್ನ ಸ್ನೇಹಿತರು: ‘ನಾನು ಮತ್ತು ಸಿದ್ದರಾಮಯ್ಯ ಜನತಾ ಪರಿವಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ ಹಳೆಯ ಸ್ನೇಹಿತರು. ಆದರೆ, ನಾನು ಬಿಜೆಪಿ ಬಿಡುವುದಿಲ್ಲ. ನಾನು ಯಾರ ವೈರಿಯೂ ಅಲ್ಲ, ಮಿತ್ರನೂ ಅಲ್ಲ’ ಎಂದು ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.

‘ನಾನು ಬಿಜೆಪಿಯವನು, ಪಕ್ಷದಲ್ಲೆ ಇರುತ್ತೇನೆ. ಸಿದ್ದರಾಮಯ್ಯನವರು ಕಾಂಗ್ರೆಸ್ಸಿನಲ್ಲೇ ಇರಲಿ. ಇಪ್ಪತ್ತು ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ನಿನ್ನೆ ಸಿದ್ದರಾಮಯ್ಯ ನನಗೆ ಕರೆ ಮಾಡಿ ಸಚಿವ ಸ್ಥಾನದ ಬಗ್ಗೆ ಕೇಳಿದರು, ಆಗ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದೆ ಅಷ್ಟೇ. ಬಿಡುವಿದ್ದರೆ ಇಬ್ಬರು ಭೇಟಿಯಾಗುತ್ತೇವೆ. ಹಾಗಂತಾ ನಾನು ಬಿಜೆಪಿ ಬಿಟ್ಟು ಹೋಗಲ್ಲ. ಇಲ್ಲೇ ಇರುತ್ತೇನೆ. 17 ಮಂದಿ ಸಚಿವರಾಗಿದ್ದಾರೆ. ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗುವ ವಿಶ್ವಾಸವಿದೆ’ ಎಂದು ಶಾಸಕ ಉಮೇಶ್ ಕತ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

‘ಬಿಎಸ್‌ವೈ ಸಚಿವ ಸಂಪುಟದಲ್ಲಿ ಬಂಟ ಸಮುದಾಯಕ್ಕೆ ಆದ್ಯತೆ ನೀಡದೆ ಅನ್ಯಾಯ ಮಾಡಲಾಗಿದೆ. ಐದನೆ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹಿರಿತನಕ್ಕೂ ಬೆಲೆ ನೀಡಿಲ್ಲ. ಹೀಗಾಗಿ ಬಿಜೆಪಿ ಕ್ರಮವನ್ನು ಖಂಡಿಸಿ ನಾಳೆ(ಆ.23) ಬಂಟರ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು’

-ಉಪೇಂದ್ರ ಶೆಟ್ಟಿ, ಅಧ್ಯಕ್ಷ ಬಂಟರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News