ನೂತನ ಸಚಿವರಿಗೆ ಖಾತೆ ಹಂಚಿಕೆ: ಹೊಸದಿಲ್ಲಿಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2019-08-22 15:38 GMT

ಬೆಂಗಳೂರು, ಆ.22: ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ರಾತ್ರಿ 7.40ಕ್ಕೆ ಹೊಸದಿಲ್ಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಇದೇ ವೇಳೆ ಸಂಪುಟ ರಚನೆಯ ಬೆನ್ನಲ್ಲೆ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆಯೂ ಯಡಿಯೂರಪ್ಪ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಗೋವಾ ಪ್ರವಾಸದಲ್ಲಿರುವುದರಿಂದ ಶುಕ್ರವಾರ ರಾತ್ರಿ ಹೊಸದಿಲ್ಲಿಗೆ ಆಗಮಿಸುವ ಸಾಧ್ಯತೆಗಳಿವೆ.

ಅಮಿತ್ ಶಾ ಭೇಟಿಗೆ ಇನ್ನೂ ಸಮಯ ನಿಗದಿಯಾಗದ ಕಾರಣ, ಶನಿವಾರ ಮಧ್ಯಾಹ್ನದ ಬಳಿಕ ಯಡಿಯೂರಪ್ಪ ಅಮಿತ್ ಶಾರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಹೊಸದಿಲ್ಲಿರುವ ಅನರ್ಹ ಶಾಸಕರನ್ನು ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಸಚಿವ ಸಂಪುಟಕ್ಕೆ ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರ್ಪಡೆ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿಯನ್ನು ಕೈ ಬಿಟ್ಟಿರುವುದಕ್ಕೆ ಉಂಟಾಗಿರುವ ಅಸಮಾಧಾನದ ಬಗ್ಗೆಯೂ ಯಡಿಯೂರಪ್ಪ, ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ ಎಂದು ತಿಳಿದು ಬಂದಿದೆ.

ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಮುಂದಾಗಿರುವುದು ಯಡಿಯೂರಪ್ಪ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News