ತಮಿಳುನಾಡು: ಒಂದು ವರ್ಷದಲ್ಲಿ ಜವಳಿ ಕ್ಷೇತ್ರದ 1.2 ಲಕ್ಷ ಉದ್ಯೋಗ ನಷ್ಟ ?

Update: 2019-08-22 15:56 GMT

ಚೆನ್ನೈ, ಆ.22: ಕಳೆದ ಒಂದು ವರ್ಷದಲ್ಲಿ ತಮಿಳುನಾಡಿನ ಜವಳಿ ಉದ್ಯಮ ಕ್ಷೇತ್ರದಲ್ಲಿ ಸುಮಾರು 1.20 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದೇಶದ ಎರಡನೇ ಅತೀ ದೊಡ್ಡ ಉದ್ಯೋಗದಾತನಾಗಿರುವ ಜವಳಿ ಕ್ಷೇತ್ರ ಇಂದು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಒಎಸ್‌ಎಮ್‌ಎ ಅಧ್ಯಕ್ಷ ಎಂ ಜಯಬಾಲ ಹೇಳಿದ್ದಾರೆ.

ಈ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕ ಅವಧಿ(ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿ)ಯಲ್ಲಿ ಹತ್ತಿ ನೂಲಿನ ರಫ್ತು ತೀವ್ರ ಇಳಿಕೆ ಕಂಡಿದ್ದು ಶೇ.34ಕ್ಕೆ ಇಳಿದಿದೆ. ಕಳೆದ ಒಂದು ವರ್ಷದಲ್ಲೇ ತಮಿಳುನಾಡಿನಲ್ಲಿ 300 ನೂಲುವ ಗಿರಣಿ ವಿವಿಧ ಕಾರಣಗಳಿಂದ ಮುಚ್ಚಿವೆ. ಕೆಲವು ಗಿರಣಿಗಳನ್ನು ಮಾರಾಟ ಮಾಡಲಾಗಿದೆ ಎಂದು ಟಿಎನ್ ಓಪನ್-ಎಂಡ್ ಸ್ಪಿನ್ನಿಂಗ್ ಮಿಲ್ಸ್ ಅಸೋಸಿಯೇಷನ್(ಒಎಸ್‌ಎಮ್‌ಎ) ಅಧ್ಯಕ್ಷ ಜಯಬಾಲ ಹೇಳಿದ್ದಾರೆ. ಅಧಿಕೃತ ಮಾಹಿತಿಯಂತೆ 2017ರ ಮಾರ್ಚ್‌ವರೆಗೆ ದೇಶದಲ್ಲಿ 605 ನೂಲುವ ಗಿರಣಿಗಳು ಮುಚ್ಚಿದ್ದು ಇದರಲ್ಲಿ ತಮಿಳುನಾಡಿನಲ್ಲೇ 225 ಗಿರಣಿಗಳು ಮುಚ್ಚಿವೆ. ಇನ್ನೂ ಹಲವು ಗಿರಣಿಗಳನ್ನು ಮಾರಾಟಕ್ಕೆ ಇಡಲಾಗಿದ್ದರೂ ಖರೀದಿಸಲು ಯಾರೂ ಆಸಕ್ತಿ ತೋರಿಲ್ಲ. ಈ ಗಿರಣಿಗಳ ಯಂತ್ರೋಪಕರಣ ಈಗ ತುಕ್ಕು ಹಿಡಿಯುತ್ತಿದೆ ಎಂದವರು ಹೇಳಿದ್ದಾರೆ.

ಈ ಬಿಕ್ಕಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಭಾರೀ ತೆರಿಗೆ ದರ ಕಾರಣವಾಗಿದೆ ಎಂದು ನಾರ್ಥರ್ನ್ ಇಂಡಿಯಾ ಟೆಕ್ಸ್‌ಟೈಲ್ ಮಿಲ್ಸ್ ಅಸೋಸಿಯೇಷನ್(ಎನ್‌ಐಟಿಎಂಎ) ಹೇಳಿದೆ. ತೆರಿಗೆ ದರ ಹೆಚ್ಚಿರುವ ಕಾರಣ ಭಾರತದ ನೂಲಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಶ್ಯಾದಿಂದ ಅಗ್ಗದ ದರದ ನೂಲು ಮರುಕಟ್ಟೆಗೆ ಬರುತ್ತಿದೆ. ಇದರಿಂದ ಸುಮಾರು ಮೂರನೇ ಒಂದು ಭಾಗದಷ್ಟು ಗಿರಣಿಗಳು ಮುಚ್ಚಿವೆ. ಕಾರ್ಯಾಚರಿಸುತ್ತಿರುವ ಗಿರಣಿಗಳೂ ಭಾರೀ ನಷ್ಟದಲ್ಲಿವೆ ಎಂದು ಎನ್‌ಐಟಿಎಂಎ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ತೆರಿಗೆ ವಿನಾಯಿತಿ ಯೋಜನೆಯನ್ನು ಹತ್ತಿ ನೂಲು ಹಾಗೂ ಸಂಯೋಜಿತ ನೂಲಿಗೂ ವಿಸ್ತರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಸಹಜ ಪರಿಸ್ಥಿತಿಯಲ್ಲಿ ಪ್ರತೀ ತಿಂಗಳೂ ಕನಿಷ್ಟ 100 ಮಿಲಿಯನ್ ಕಿ.ಗ್ರಾಂನಷ್ಟು ಹತ್ತಿ ನೂಲು ರಫ್ತಾಗುತ್ತಿತ್ತು. ಆದರೆ ಈ ವರ್ಷದ ಜೂನ್‌ನಲ್ಲಿ ಕೇವಲ 57 ಮಿಲಿಯನ್ ಕಿ.ಗ್ರಾಂ ಹತ್ತಿನೂಲು ರಫ್ತಾಗಿದೆ. ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಘರ್ಷ ಹಾಗೂ ಚೀನಾ-ಪಾಕಿಸ್ತಾನ ನಡುವಿನ ವ್ಯಾಪಾರ ಒಪ್ಪಂದ ಇದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರಫ್ತು ಕುಸಿದಿದ್ದರೂ ಹತ್ತಿ ನೂಲು ಉತ್ಪಾದನೆ ಈ ವರ್ಷ ಶೇ.6.3ರಷ್ಟು, ಸಂಯೋಜಿತ ನೂಲಿನ ಉತ್ಪಾದನೆ ಶೇ.18ರಷ್ಟು ಹೆಚ್ಚಿದೆ. ಗಿರಣಿಯ ನೂಲಿನ ಉತ್ಪಾದನೆ ಶೇ.9.6ರಷ್ಟು ಹೆಚ್ಚಿದೆ. ಕಚ್ಚಾ ವಸ್ತುಗಳ ಅಧಿಕ ಬೆಲೆ ರಫ್ತು ಮಾರುಕಟ್ಟೆಯಲ್ಲಿ ಭಾರತದ ನೂಲಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಇಂಡಿಯನ್ ಟೆಕ್ಸ್‌ಪ್ರೂನರ್ಸ್ ಫೆಡರೇಶನ್‌ನ ಸಂಯೋಜಕ ಡಿ ಪ್ರಭು ಹೇಳಿದ್ದಾರೆ. ಚೀನಾ- ಅಮೆರಿಕ ನಡುವಿನ ವ್ಯಾಪಾರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಭಾರತ ಬಳಸಿಕೊಂಡು ಅಮೆರಿಕದ ಮಾರುಕಟ್ಟೆಗೆ ನಮ್ಮ ಬಟ್ಟೆಯ ರಫ್ತನ್ನು ಹೆಚ್ಚಿಸಬೇಕು. ಆರ್‌ಬಿಐ ಸಾಲದ ದರವನ್ನು ಕಡಿಮೆಗೊಳಿಸಿದ್ದು ಇದರ ಪೂರ್ಣ ಲಾಭ ಉದ್ದಿಮೆಗಳಿಗೆ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಆಗ ಜವಳಿ ಕ್ಷೇತ್ರ ಚೇತರಿಸಿಕೊಳ್ಳಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News