ಯೂರಿಯಾ ಪೂರೈಕೆ ಬಗ್ಗೆ ರೈತರಿಗೆ ಆತಂಕ ಬೇಡ: ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್

Update: 2019-08-22 18:30 GMT

ಶಿವಮೊಗ್ಗ, ಆ. 22: ರೈತರಿಗೆ ಅಗತ್ಯವಿರುವಷ್ಟು ಯೂರಿಯಾ ಪೂರೈಕೆ ಆಗುತ್ತಿದ್ದು, ಒಂದೆರಡು ದಿನಗಳಲ್ಲಿ ಎರಡುವರೆ ಸಾವಿರ ಟನ್ ಯೂರಿಯಾ ಜಿಲ್ಲೆಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ರೈತರಿಗೆ ಭರವಸೆ ನೀಡಿದರು.

ಅವರು ಗುರುವಾರ ಶಿಕಾರಿಪುರದಲ್ಲಿ ರಸಗೊಬ್ಬರ ವಿತರಣಾ ಕೇಂದ್ರ, ಸ್ಟಾಕ್‍ಯಾರ್ಡ್ ಮತ್ತು ಗೋದಾಮುಗಳಿಗೆ ಭೇಟಿ ನೀಡಿ ಯೂರಿಯಾ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು.

ನ್ಯಾಷನಲ್ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಮುಂಬೈ ಸಂಸ್ಥೆಯಿಂದ ಎರಡುವರೆ ಸಾವಿರ ಟನ್ ಯೂರಿಯಾ ಒಂದೆರಡು ದಿನಗಳಲ್ಲಿ ಜಿಲ್ಲೆಗೆ ತಲುಪಲಿದೆ. ಮಂಡ್ಯ, ಹಾಸನ ಜಿಲ್ಲೆಗಳಿಂದ ಹೆಚ್ಚುವರಿಯಾಗಿ ಸುಮಾರು ಒಂದು ಸಾವಿರ ಟನ್ ಯೂರಿಯಾ ನಾಳೆ ಸಂಜೆ ಒಳಗಾಗಿ ಜಿಲ್ಲೆಗೆ ಪೂರೈಕೆಯಾಗಲಿದೆ. ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಯೂರಿಯಾ ಸರಬರಾಜು ಮಾಡಲಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ರಸಗೊಬ್ಬರ ಕೊರತೆ ಬಗ್ಗೆ ಯಾವುದೇ ಆತಂಕ ಬೇಡ. ಈ ಕುರಿತು ವದಂತಿಗಳಿಗೆ ಕಿವಿಗೊಡಬಾರದು. ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಭರವಸೆ ನೀಡಿದರು.

ಭೇಟಿ: ಜಿಲ್ಲಾಧಿಕಾರಿ ಅವರು ಶಿಕಾರಿಪುರದಲ್ಲಿರುವ ರಸಗೊಬ್ಬರ ವಿತರಣಾ ಕೇಂದ್ರ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ತಾಲೂಕಿನಲ್ಲಿ ಲಭ್ಯವಿರುವ ಯೂರಿಯಾ ದಾಸ್ತಾನು ಮಾಹಿತಿಯನ್ನು ಪಡೆದರು. ಯೂರಿಯಾ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿಗಾವಹಿಸಿ ಕಠಿಣ ಕ್ರಮ ಜರುಗಿಸುವಂತೆ ಅವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News