ಅಧಿಕಾರಿಗಳು ಸಭೆಗೆ ಕಾಟಾಚಾರಕ್ಕೆ ಭಾಗವಹಿಸುವುದು ಬೇಡ: ಚಿಕ್ಕಮಗಳೂರು ತಾಪಂ ಅಧ್ಯಕ್ಷ ಗರಂ

Update: 2019-08-22 18:50 GMT

ತಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆ

ಚಿಕ್ಕಮಗಳೂರು, ಆ.22: ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ತಾಪಂ ಸಭೆಗೆ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಹೊಂದಿರುವುದು ಅತ್ಯಗತ್ಯ. ಮಾಹಿತಿ ಇಲ್ಲದಿದ್ದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಹೇಗೆ? ಎಂದು ತಾಪಂ ಅಧ್ಯಕ್ಷ ನೆಟ್ಟೆಕರೆಹಳ್ಳಿ ಜಯಣ್ಣ ಅಧಿಕಾರಿಗಳನ್ನು ತರಾಟೆಗೆ ಪಡೆದು, ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಜಯಣ್ಣ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕಂದಾಯ, ಕೃಷಿ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ಒಪ್ಪಿಸುತ್ತಿದ್ದ ಸಂದರ್ಭದಲ್ಲಿ ತಾಪಂ ಅಧ್ಯಕ್ಷ, ಸದಸ್ಯರು ಕೇಳಿದ ಮಾಹಿತಿಗೆ ಸಮರ್ಪಕ ಮಾಹಿತಿ ನೀಡಿದ್ದಿದ್ದರಿಂದ ಕುಪಿತರಾದ ಅವರು, ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ನರ್ವಹಿಸುವುದು ಬೇಡ. ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸೂಚನೆ ನೀಡಿದರು.

ಸಭೆಯ ಆರಂಭದಲ್ಲಿ ಅತೀವೃಷ್ಟಿಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಹಾನಿಯಾದ ಮನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ ಚಿಕ್ಕಮಗಳೂರು ತಾಲೂಕು ಕಚೇರಿ ಶಿರಸ್ತೇದಾರ್, ತಾಲೂಕಿನಲ್ಲಿ ಅತೀವೃಷ್ಟಿಯಿಂದಾಗಿ 247 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ಮನೆಗಳಿಗೆ ಶೇ.15ರಷ್ಟು ಹಾನಿಯಾಗಿದ್ದರೆ 5200 ರೂ., ಶೇ.50ರಷ್ಟು ಹಾನಿಯಾಗಿದ್ದರೆ, 42,795 ರೂ. ಹಾಗೂ ಶೇ.75ರಿಂದ 100ರಷ್ಟು ಹಾನಿಯಾಗಿದ್ದರೇ 95,300 ರೂ. ಪರಿಹಾರಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ತಾಪಂ ಅಧ್ಯಕ್ಷ ಜಯಣ್ಣ, ಇದುವರೆಗೂ ಎಷ್ಟು ಸಂತ್ರಸ್ಥರಿಗೆ ಪರಿಹಾರಧನ ನೀಡಲಾಗಿದೆ? ಎಷ್ಟೆಷ್ಟು ಮನೆಗಳಿಗೆ, ಎಷ್ಟೆಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಪ್ರಶ್ನಿಸಿದಾಗ, ಪಿಡಿಒ, ಆರ್‍ಐ ಹಾಗೂ ಇಂಜಿನಿಯರ್ ಒಳಗೊಂಡ ತಂಡವೊಂದು ಮನೆಗಳ ಹಾನಿ ಸಂಬಂಧ ಸಮೀಕ್ಷೆ ನಡೆಸುತ್ತಿದ್ದು, ಸಂಪೂರ್ಣ ಸಮೀಕ್ಷಾ ವರದಿ ಬಂದ ನಂತರ ಪರಿಹಾರಧನ ವಿತರಿಸಲಾಗುವುದು ಎಂದು ಡಿಟಿಒ ಸಮಜಾಯಿಸಿ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಯಣ್ಣ, ಅಧಿಕಾರಿಗಳ ಬಳಿ ಸಮೀಕ್ಷಾ ವರದಿಯೇ ಇಲ್ಲ. ಎಷ್ಟು ಮನೆಗಳಿಗೆ, ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಮಾಹಿತಿ ಇಲ್ಲದಿದ್ದರೇ ಪರಿಹಾರ ನೀಡುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಿದ್ದಾಪುರ ತಾಪಂ ಕ್ಷೇತ್ರದ ರಮೇಶ್, ಸಿದ್ದಾಪುರ ಗ್ರಾಮದಲ್ಲಿ ಕಳೆದ ವರ್ಷ ಮನೆಯೊಂದಕ್ಕೆ ಅತೀವೃಷ್ಟಿಯಿಂದ ಹಾನಿಯಾಗಿತ್ತು. ಅದಕ್ಕೆ ಪರಿಹಾರವನ್ನೂ ನೀಡಲಾಗಿದೆ. ಈ ಬಾರಿ ಅದೇ ಮನೆಗೆ ಮತ್ತೆ ಹಾನಿಯಾಗಿದ್ದು, ಮತ್ತೆ ಪರಿಹಾರ ನೀಡಲಾಗುತ್ತಿದೆ. ಅಧಿಕಾರಿಗಳು ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಶಿಥಿಲಗೊಂಡಿದ್ದ ಮನೆಯನ್ನು ಪರಿಹಾರಕ್ಕಾಗಿ ಉದ್ದೇಶಪೂರ್ವಕವಾಗಿ ಕೆಡವಲಾಗಿದೆ. ಇದರಿಂದ ನೈಜ ಫಲಾನುಭವಿಗಳಿಗೆ ಪರಿಹಾರ ಸಿಗದಂತಾಗುತ್ತದೆ ಎಂದು ಆರೋಪಿಸಿದರು. ಈ ವೇಳೆ ಜಯಣ್ಣ ಮಾತನಾಡಿ, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದರಿರುವುದು ಇಂತಹ ಪ್ರಕರಣಗಳಿಂದ ಬೆಳಕಿಗೆ ಬರುತ್ತಿದೆ. ಸರಕಾರದ ಪರಿಹಾರ ಧನ ನೈಜ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು.

ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯಾ ನಟೇಶ್ ಮಾತನಾಡಿ, ಆಲ್ದೂರು ಪಟ್ಟಣದಲ್ಲಿ ಅತೀವೃಷ್ಟಿಯಿಂದ ಹಳೆಯ ಮನೆಯೊಂದಕ್ಕೆ ಹಾನಿಯಾಗಿದೆ. ಆದರೆ ಈ ಮನೆಯಲ್ಲಿ ಯಾರೂ ವಾಸವಿಲ್ಲ. ಅಧಿಕಾರಿಗಳು ಇಂತಹ ಮನೆಗಳಿಗೂ ಪರಿಹಾರ ನೀಡಲು ಸಮೀಕ್ಷೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ವಾಸವಿಲ್ಲದ ಮನೆಗಳಿಗೆ ಪರಿಹಾರ ನೀಡಬಾರದು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯತ್‍ ವಾರು ಗ್ರಾಮ ಠಾಣಾ ಜಾಗಗಳನ್ನು ಗುರುತಿಸುವ ಕೆಲಸ ಕಳೆದ ಮೂರು ವರ್ಷಗಳಿಂದ ಆಗಿಯೇ ಇಲ್ಲ. ತಹಶೀಲ್ದಾರ್ ಗ್ರಾಮಾಠಾಣಾ ಜಾಗಗಳನ್ನು ಗುರುತು ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಜಾಗ ಗುರುತು ಮಾಡದಿರುವುದರಿಂದ ನಿವೇಶನ ರಹಿತರಿಗೆ ನಿವೇಶನ ಜಾಗ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯತ್ ಸಭೆಗಳಲ್ಲಿ ಈ ಬಗ್ಗೆ ವಿಚಾರಿಸೋಣ ಎಂದರೆ ಕಂದಾಯ ಅಧಿಕಾರಿಗಳು ಸಭೆಗೆ ಬರುವುದಿಲ್ಲ ಎಂದು ತಾಪಂ ಸದಸ್ಯರಾದ ಮಹೇಶ್, ರಮೇಶ್, ಭವ್ಯಾ ನಟೇಶ್ ಸೇರಿದಂತೆ ಕೆಲ ಮಹಿಳಾ ಸದಸ್ಯೆಯರು ಧ್ವನಿ ಎತ್ತಿದರು. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಮುಖಂಡ ಹಾಗೂ ತಾಪಂ ಸದಸ್ಯ ಡಿ.ಜೆ.ಸುರೇಶ್, ವಸ್ತಾರೆ ಹಾಗೂ ಕೂದುವಳ್ಳಿ ಹೋಬಳಿಗಳಲ್ಲಿ ಗ್ರಾಮಠಾಣಾ ಜಾಗಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ತೆರವು ಮಾಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ತಾರಾನಾಥ್, ಗ್ರಾಮಾಠಾಣಾ ಜಾಗ ಒತ್ತುವರಿಯಾಗಿರುವುದು ನಿಜ. ಈ ಸಂಬಂಧ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು. ತಾಪಂ ಅಧ್ಯಕ್ಷ ಜಯಣ್ಣ ಮಾತನಾಡಿ, ಗ್ರಾಮಠಾಣಾ ಜಾಗ ಗುರುತು ಸಂಬಂಧ ಗ್ರಾಪಂ ಸಭೆಗಳಿಗೆ ಹಾಜರಾಗದಿರುವ ಅಧಿಕಾರಿಗಳ ಬಗ್ಗೆ ದೂರು ನೀಡಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಅವರು ಸಭೆಗೆ ಮಾಹಿತಿ ನೀಡುತ್ತಿದ್ದ ವೇಳೆ, ಭವ್ಯಾ ನಟೇಶ್ ಮಾತನಾಡಿ, ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ಔಷಧಗಳ ದಾಸ್ತಾಸು ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಭಾರೀ ಸಮಸ್ಯೆಯಾಗಿತ್ತು. ರೇಬಿಸ್ ಲಸಿಕೆಯೂ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಈ ಲಸಿಕೆ ಜಿಲ್ಲೆಯ ಯಾವ ಆಸ್ಪತ್ರೆಯಲ್ಲೂ ಲಭ್ಯವಿಲ್ಲ, ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಔಷಧಗಳ ಕೊರತೆಗೆ ಕಾರಣ ಎನೆಂದು ಪ್ರಶ್ನಿಸಿದರು. ಇದೇ ವೇಳೆ ಡಿ.ಜೆ.ಸುರೇಶ್ ಮಧ್ಯೆ ಪ್ರವೇಶಿಸಿ, ಆಲ್ದೂರು ಆಸ್ಪತ್ರೆ ದನಗಳ ದೊಡ್ಡಿಯಾಗಿದೆ. ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ, ಔಷಧಗಳಿಲ್ಲ, ಸ್ವಚ್ಛತೆಯಂತೂ ಮರೀಚಿಕೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಡಾ.ಸೀಮಾ, ಈ ಸಮಸ್ಯೆ ಇಡೀ ರಾಜ್ಯದಾದ್ಯಂತ ಇತ್ತು. ಸದ್ಯ ಯಾವುದೇ ಸಮಸ್ಯೆ ಇಲ್ಲ. ರೇಬಿಸ್ ಲಸಿಕೆ ಎಲ್ಲೂ ಲಭ್ಯವಿಲ್ಲ. ಮೆಡಿಕಲ್‍ಗಳಲ್ಲಿ ಸಿಗುತ್ತಿಲ್ಲ ಎಂದು ಸಮಾಜಾಯಿಸಿ ನೀಡಿದರು.

ಟಿಎಚ್‍ಒ ಉತ್ತರದಿಂದ ಅಸಮಾಧಾನಗೊಂಡ ತಾಪಂ ಅಧ್ಯಕ್ಷ ಜಯಣ್ಣ, ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು ಲಭ್ಯವಿಲ್ಲ ಎಂದರೆ ಹೇಗೆ? ಔಷಧಗಳ ಕೊರತೆ ಎದುರಾದಲ್ಲಿ ತಾಲೂಕು ವೈದ್ಯಾಧಿಕಾರಿಯಾದವರು ಸಮಸ್ಯೆ ಪರಿಹರಿಸಬೇಕು. 15 ದಿನಗಳಿಂದ ಔಷಧಗಳು ಲಭ್ಯವಿಲ್ಲ ಎಂದರೆ ಇದಕ್ಕೆ ವೈದ್ಯಾಧಿಕಾರಿಗಳೇ ಹೊಣೆ ಎಂದು ಸಿಡಿಮಿಡಿಗೊಂಡ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ ವೈದ್ಯರ ಶಿಫಾರಸಿನೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಯಿಂದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಿದ್ದಾರೆ. ಈ ಹಣ ಮರುಪಾವತಿಗೆ ಕ್ರಮಕೈಗೊಳ್ಳುವಂತೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಟಿಎಚ್‍ಒ ಯಾವುದೇ ಕ್ರಮಕೈಗೊಂಡಿಲ್ಲ. ಈ ರೀತಿಯ ಕಾರ್ಯವೈಖರಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ನಂತರ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಚರ್ಚೆ ವೇಳೆ, ಪ್ರಧಾನಮಂತ್ರಿ ವಿಮಾ ಹಣ ಎಷ್ಟು ರೈತರಿಗೆ ಪಾವತಿಯಾಗಿದೆ ಎಂದು ತಾಪಂ ಅಧ್ಯಕ್ಷ ಮಾಹಿತಿ ಕೇಳಿದರು, ಇದೇ ವೇಳೆ ಸಿದ್ದಾಪುರ ರಮೇಶ್, ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿದರು. ಕೃಷಿ ಇಲಾಖೆಯ ತಾಲೂಕು ಅಧಿಕಾರಿ ಗುಲ್ಫರ್ ಸೈಬಾ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷರಿಂದ ತರಾಟೆಗೊಳಗಾದರು. ಮಾಹಿತಿ ಇಲ್ಲದೇ ಸಭೆಗೆ ಬರಬೇಡಿ, ನಾವು ಕಾಟಾಚಾರಕ್ಕೆ ಸಭೆ ಮಾಡುತ್ತಿಲ್ಲ. ಅಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕೆಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಆಲ್ದೂರು ರೈತಸಂಪರ್ಕ ಕೇಂದ್ರದ ಕಟ್ಟಡ ನಿರ್ಮಿಸಿದ್ದರೂ ಉದ್ಘಾಟನೆಯಾಗದಿರುವುದು, ಕಳಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ವಾಹನ ಒದಗಿಸದಿರುವ ಬಗ್ಗೆ ತಾಪಂ ಸದಸ್ಯರು ಸಭೆಯ ಗಮನಸೆಳೆದರು. ನಂತರ ಆಹಾರ, ತೋಟಗಾರಿಕೆ, ಮೆಸ್ಕಾಂ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ದೀಪಾ ನಾಗೇಶ್, ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಭವ್ಯಾ ನಟೇಶ್ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಕಳಸಾಪುರ ತಾಪಂ ಕ್ಷೇತ್ರದ ಮಹೇಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿರುವ ಪಹಣಿ ಕೇಂದ್ರದಲ್ಲಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರು, ರೈತರು ಸರಕಾರಿ ದಾಖಲೆಗಳಿಗಾಗಿ ಬಂದರೆ ಸಿಬ್ಬಂದಿ ಮೊಬೈಲ್‍ಗಳಲ್ಲಿ ಮಾತನಾಡುತ್ತಾ ಕಾಲಾಹರಣ ಮಾಡುತ್ತಾ ಸತಾಯಿಸುತ್ತಿರುತ್ತಾರೆ. ಇದರಿಂದಾಗಿ ರೈತರಿಗೆ ಸಕಾಲದಲ್ಲಿ ಸೌಲಭ್ಯಗಳು ದೊರಕದಂತಾಗಿದೆ. ಇಂತಹ ಸಿಬ್ಬಂದಿ ವಿರುದ್ಧ ತಹಶೀಲ್ದಾರ್ ಅವರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ತಾಪಂ ಅಧ್ಯಕ್ಷ ಜಯಣ್ಣ, ಸಾಮಾನ್ಯ ಸಭೆಯ ಬಳಿಕ ಪಿಡಿಒಗಳ ಸಭೆಗೆ ತಹಶೀಲ್ದಾರ್ ಆಗಮಿಸಲಿದ್ದಾರೆ. ಅವರಿಂದ ಈ ಬಗ್ಗೆ ಸ್ಪಷ್ಟೀಕರಣ ಪಡೆದು, ಪಹಣಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಿಬ್ಬಂದಿ ಬಗ್ಗೆ ದೂರು ಕೊಟ್ಟಲ್ಲಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.

ಅತೀವೃಷ್ಟಿ ಪರಿಹಾರ ನಿಧಿಗೆ ಬಿಜೆಪಿ ಸದಸ್ಯರ ಗೌರವಧನ; ಮಾತಿನ ಚಕಮಕಿ:
ಈ ಭಾರಿ ಮಲೆನಾಡಿನಲ್ಲಿ ಸಂಭವಿಸಿದ ಭಾರೀ ಹಾನಿಗೆ ನೆರವು ನೀಡುವ ಉದ್ದೇಶದಿಂದ ತಾಲೂಕು ಪಂಚಾಯತ್‍ನ ಬಿಜೆಪಿ ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ 21 ಸಾವಿರ ರೂ.ಅನ್ನು ಪಕ್ಷದ ಕಚೇರಿ ವತಿಯಿಂದ ಅತೀವೃಷ್ಟಿ ಪರಿಹಾರ ನಿಧಿಗೆ ನೀಡಿದ್ದೇವೆ ಎಂದು ತಾಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಸಭೆಗೆ ತಿಳಿಸಿದರು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಸದಸ್ಯರಾದ ಡಿ.ಜೆ.ಸುರೇಶ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸದಸ್ಯರು, ಅತೀವೃಷ್ಟಿ ಸಂತ್ರಸ್ಥರಿಗೆ ನೆರವು ನೀಡಲು ನಮಗೂ ಮನಸ್ಸಿದೆ. ಬಿಜೆಪಿ ಸದಸ್ಯರು ಮಾತ್ರ ಗೌರವಧನ ಸಂಗ್ರಹಿಸಿ ಅದನ್ನು ಪಕ್ಷದ ವತಿಯಿಂದ ನೀಡಿರುವುದು ಸರಿಯಲ್ಲ. ಅದನ್ನು ಜಿಲ್ಲಾಧಿಕಾರಿಗೆ ನೇರವಾಗಿ ಸಲ್ಲಿಸಬೇಕು. ಗೌರವಧನ ಸಂಗ್ರಹಿಸುವ ಬಗ್ಗೆ ಮೊದಲೇ ಹೇಳಿದ್ದರೇ ನಾವು ನೀಡುತ್ತಿದ್ದೆವು. ಬಿಜೆಪಿ ಸದಸ್ಯರು ಗೌರವಧನವನ್ನು ಪಕ್ಷದ ವತಿಯಿಂದ ನೀಡಿರುವುದರಿಂದ ಈ ಬಗೆಗಿನ ಚರ್ಚೆ ಇಲ್ಲಿ ಬೇಡ, ಅದೆನಿದ್ದರೂ ಬಿಜೆಪಿ ಪಾರ್ಟಿ ಆಫೀಸಿನಲ್ಲಿಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News