ಚಿಕ್ಕಮಗಳೂರು: ಋಣಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಕೆಗೆ ನೂಕುನುಗ್ಗಲು

Update: 2019-08-23 18:25 GMT

ಚಿಕ್ಕಮಗಳೂರು, ಆ.23: ಮಾಜಿ ಸಿಎಂ ಕುಮಾರಸ್ವಾಮಿ ಜಾರಿಗೊಳಿಸಿದ್ದ ಋಣಮುಕ್ತ ಕಾಯ್ದೆ ಜಿಲ್ಲಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಬಡವರ್ಗದ ಜನರ ಪಾಲಿಗೆ ವರದಾನವಾಗಿದ್ದು, ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿ, ಸಂಸ್ಥೆಗಳಿಂದ ಸಾಲ, ಕೈಸಾಲ ಪಡೆದ ಸಾವಿರಾರು ಮುಂದೆ ಈ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿದಿನ ಜಮಾಯಿಸುತ್ತಿದ್ದಾರೆ.

ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದಾದ್ಯಂತ ಕೈಸಾಲ, ಖಾಸಗಿ ಲೇವಾದೇವಿ ಮತ್ತಿತರರಿಂದ ಸಾಲ ಪಡೆದು ಸಾಲ ತೀರಿಸಲಾಗದೇ ಸಂಕಷ್ಟದಲ್ಲಿದ್ದವರ ನೆರವಿಗಾಗಿ ಕರ್ನಾಟಕ ರಾಜ್ಯ ಋಣಮುಕ್ತ ಕಾಯ್ದೆಯನ್ನು ಕಳೆದ ಜುಲೈ ತಿಂಗಳಿನಲ್ಲಿ ಜಾರಿ ಮಾಡಿದ್ದರು. ಸದ್ಯ ಅವರು ಅಧಿಕಾರ ಕಳೆದುಕೊಂಡಿದ್ದರೂ ಕುಮಾರಸ್ವಾಮಿ ಜಾರಿ ಮಾಡಿದ ಕಾಯ್ದೆ ಜಿಲ್ಲೆಯ ಸಾವಿರಾರು ಬಡವರ್ಗದ ಸಾಲಗಾರರ ಪಾಲಿಗೆ ವರದಾನವಾಗಿ ಪರಿಣಮಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ.

ಕಳೆದ ಆ.21ರಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಋಣಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ ತಾಲೂಕುಗಳ ಸುಮಾರು 1500ಕ್ಕೂ ಹೆಚ್ಚು ಫಲಾನುಭವಿಗಳು ಈ ಕಾಯ್ದೆಯಡಿ ಅರ್ಜಿಸಲ್ಲಿಸಿದ್ದಾರೆ. ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು ತಾಲೂಕುಗಳ ಸಾಲಗಾರರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ತರೀಕರೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತರೀಕೆರೆ ವಿಭಾಗದಲ್ಲಿ ಕಳೆದ ಮೂರು ದಿನಗಳಿಂದ 160ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಅ.2 ಕೊನೆಯ ದಿನವಾಗಿದ್ದು, ಚಿಕ್ಕಮಗಳೂರು ಹಾಗೂ ತರೀಕೆರೆ ಉಪವಿಭಾಗಾಧಿಕಾರಿ ಕಚೇರಿ ಎದುರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಪ್ರತಿನಿತ್ಯ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿದೆ.

ಯಾರ್ಯಾರು ಅರ್ಜಿ ಸಲ್ಲಿಸಬಹುದು: ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದಿದ್ದರೆ, ಪಾನ್ ಬ್ರೋಕರ್, ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ಕಡುಬಡವರು, ವಾರ್ಷಿಕ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು, 2 ಹೆಕ್ಟೇರ್ ಒಣಭೂಮಿ ಹೊಂದಿರುವವರು, 2 ಬೆಳೆಗಿಂತ ಹೆಚ್ಚು ಬೆಳೆ ತೆಗೆಯುವ ಕಾಲು ಹೆಕ್ಟೇರ್ ನೀರಾವರಿ ಜಮೀನು ಹೊಂದಿದವರು, ವರ್ಷಕ್ಕೆ 1 ಬೆಳೆ ತೆಗೆಯುವ ಅರ್ಧ ಹೆಕ್ಟೇರ್ ನೀರಾವರಿ ಜಮೀನು ಹೊಂದಿರುವವರು ಸರಕಾರದ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News