ಬದುಕಿನ ಭಾಗವಾಗಿ ಕನ್ನಡ ಭಾಷೆ

Update: 2019-08-24 18:50 GMT

‘ಕನ್ನಡ’ ಭಾಷೆ ಎಂದಲ್ಲ, ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶದಲ್ಲಿ ಸಿಲುಕಿಕೊಂಡಿದೆ. ಈ ಭಾಷೆಗಳು ಕೇವಲ ಹೊರಗಿನ ಸವಾಲನ್ನು ಮಾತ್ರವಲ್ಲ, ಒಳಗಿನ ಸವಾಲನ್ನೂ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಇಂಗ್ಲಿಷ್‌ನ ಸವಾಲು. ಮಗದೊಂದೆಡೆ ವಿಜ್ಞಾನ, ತಂತ್ರಜ್ಞಾನದಂತಹ ಆಧುನಿಕ ವಿಷಯಗಳನ್ನು ಈ ಭಾಷೆಗಳು ತನ್ನವಾಗಿಸಿಕೊಳ್ಳಲು ವಿಫಲವಾಗಿರುವುದು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳ ವೈಫಲ್ಯಕ್ಕೆ ಇದೊಂದು ಮುಖ್ಯ ಕಾರಣ. ಇಂದು ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಇತ್ಯಾದಿಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅಳವಡಿಸಿಕೊಳ್ಳುವ ಸವಾಲನ್ನು ಸಮರ್ಥವಾಗಿ ಸ್ವೀಕರಿಸಲು ನಾವು ಸಂಪೂರ್ಣವಾಗಿ ವಿಫಲರಾಗಿದ್ದೇವೆ. ಜೊತೆಗೆ ಕಂಪ್ಯೂಟರ್ ಜಗತ್ತಿನ ಮುಂದೆಯೂ ಪ್ರಾದೇಶಿಕ ಭಾಷೆಗಳು ಹಿಂಜರಿಕೆಯನ್ನು ವ್ಯಕ್ತಪಡಿಸುತ್ತಿವೆ. ಇವೆಲ್ಲದರ ನಡುವೆ ನಮ್ಮದೇ ಪ್ರಭುತ್ವ ಹೇರುತ್ತಿರುವ ಹಿಂದಿ ಭಾಷೆ. ಇವುಗಳನ್ನೆಲ್ಲ ಎದುರಿಸಿ ಗೆದ್ದು ಕನ್ನಡದಂತಹ ಭಾಷೆಗಳು ಜನರ ಬದುಕಿನ ಭಾಷೆಯಾಗಿ ಎದ್ದು ನಿಲ್ಲಬಹುದೇ? ಈ ಮಹತ್ವದ ವಿಷಯವನ್ನು ಚರ್ಚಿಸುತ್ತೆ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರ ‘ಕನ್ನಡ ಭಾಷೆ-ಬದುಕು’ ಕೃತಿ. ಕನ್ನಡ ನಾಡು ನುಡಿ ಮತ್ತು ಅವುಗಳ ಅಳಿವು ಉಳಿವಿಗೆ ಸಂಬಂಧಿಸಿದ 17 ಲೇಖನಗಳು ಈ ಕೃತಿಯಲ್ಲಿವೆ. ಜೊತೆಗೆ ಕನ್ನಡ ಭಾಷೆ ಬದುಕಿಗೆ ಸಂಬಂಧಿಸಿದ 6 ಕವಿತೆಗಳೂ ಕನ್ನಡದ ಇಂದಿನ ದಯನೀಯ ಸ್ಥಿತಿಯನ್ನು ತೆರೆದಿಡುತ್ತವೆ.
  ಇಲ್ಲಿರುವ ಹೆಚ್ಚಿನ ಲೇಖನಗಳು ಸಾಂದರ್ಭಿ ಕವಾದವುಗಳು. ಸದ್ಯ ಕನ್ನಡ ಎದುರಿಸುತ್ತಿರುವ ಸಮಸ್ಯೆ ಸವಾಲುಗಳಿಗೆ ಕಾಲಕಾಲಕ್ಕೆ ಪ್ರತಿಕ್ರಿಯಿಸಿ ಬರೆದ ಲೇಖನಗಳು. ಸರಳವಾಗಿ, ನೇರವಾಗಿ ಮತ್ತು ಸ್ಪಷ್ಟವಾಗಿ ಕನ್ನಡದ ಅಭಿವೃದ್ಧಿಗೆ ಆಗಬೇಕಾದ ಕೆಲಸಗಳ ಬಗ್ಗೆ ಈ ಲೇಖನಗಳು ಮಾತನಾಡುತ್ತವೆ. ಭಾಷೆಯನ್ನೇ ಬುದ್ಧಿ ಎಂದು ಸಮೀಕರಿಸಿಕೊಂಡ ಮತಿಗೇಡಿತನ ಹೇಗೆ ಕನ್ನಡಕ್ಕೆ ಮುಳುವಾಗುತ್ತಿದೆ ಎನ್ನುವುದನ್ನು ‘ಇಚ್ಛಾಶಕ್ತಿ ಎಂಬ ಜೀವಧಾತು’ ಕೃತಿಯಲ್ಲಿ ವಿವರಿಸುತ್ತಾರೆ. ‘ಶಿಕ್ಷಣ-ಆರೋಗ್ಯಗಳನ್ನು ಪ್ರಜೆಗಳಿಗೆ ನೀಡುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಇದನ್ನು ಖಾಸಗಿಯವರಿಗೆ ವಹಿಸಿರುವುದರಿಂದ ಅವರು ಇವೆರಡನ್ನೂ ಉದ್ಯಮ ಕ್ಷೇತ್ರವಾಗಿ ಮಾಡಿಕೊಂಡು ಉಳ್ಳವರಿಗೆ ಶಿಕ್ಷಣ, ಉಳ್ಳವರಿಗೆ ಆರೋಗ್ಯ ಎನ್ನುವಂತಾಗಿದೆ. ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ಎಂಬುದು ಕಳೆದು ಹೋಗಿದೆ. ಸಮಾಜದಲ್ಲಿ ಅಸಮಾನತೆಯ ಕಂದಕ ಅಗಾಧವಾಗಿ ಬೆಳೆಯುತ್ತಿದೆ’ ಎಂದು ಲೇಖಕರು ಆತಂಕ ಪಡುತ್ತಾರೆ. ಪ್ರಾಧಿಕಾರಕ್ಕೆ ಹಿಡಿಯುವ ‘ಕನ್ನಡ ಜಾಗೃತಿ ಪತ್ರಿಕೆ’, ದ್ರಾವಿಡ ಭಾಷಾ ಒಕ್ಕೂಟವೂ, ಭಾರತ ಒಕ್ಕೂಟವೂ, ಪ್ರಾದೇಶಿಕ ಭಾಷೆಗಳನ್ನು ಉಳಿಸುವುದರಲ್ಲಿ ರಾಜಕೀಯ ಪಕ್ಷಗಳ ಹೊಣೆಗಾರಿಕೆ, ಕಲ್ಲಕುಂಡವೆಂಬ ಇಂಗ್ಲಿಷೂ ನೆಲಮೂಲವೆಂಬ ಕನ್ನಡವೂ, ಸರಕಾರಿ ಶಾಲೆಗಳ ಸಬಲೀಕರಣದ ಸಮಿತಿ ವರದಿ, ಜಾನಪದ ಪದಕೋಶ ಅಗತ್ಯ, ವರದಿಗಳ ಅಗತ್ಯತೆ-ಅನುಷ್ಠಾನ ಹೀಗೆ ಕನ್ನಡದ ಉಳಿವಿಗೆ ಸಂಬಂಧಿಸಿದ ಹಲವು ಲೇಖನಗಳು ಈ ಕೃತಿಯಲ್ಲಿವೆ. ‘ಕನ್ನಡಂಗಳೊಳವು’ ಲೇಖನದಲ್ಲಿ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಸಬಲೀಕರಣಕ್ಕೆ ನಡೆಸಿದ ಕೆಲಸದ ಸಂಕ್ಷಿಪ್ತ ವರದಿಯಿದೆ. ಕೃತಿಯ ಕೊನೆಯಲ್ಲಿ ಲೇಖನದ ಆಶಯಗಳನ್ನು ಹೇಳುವ ಇಗೋ ಕನ್ನಡ, ಕನಸು ಮಾರುವ ದಾರಿ, ತಬ್ಬಲಿರಾಜ್ಯಗಳು, ಬಸವ ಕನ್ನಡ, ಮುಚ್ಚೇವು ಕನ್ನಡದ ಶಾಲೆ, ನೆಲಭಾಷೆ ಹೀಗೆ ಆರು ಕವಿತೆಗಳಿವೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 128. ಮುಖಬೆಲೆ 125 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News