ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸ್ಪಂದಿಸಲು ಎಬಿಸಿ ಮುಂದಾಗಲಿ: ಹೊಲದಗದ್ದೆ ಗಿರೀಶ್

Update: 2019-08-24 18:50 GMT

ಚಿಕ್ಕಮಗಳೂರು, ಆ.24: ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸ್ಪಂದಿಸಲು ಎಬಿಸಿ ಕಾಫಿ ಟ್ರೇಡಿಂಗ್ ಕಂಪೆನಿಯ ಆಡಳಿತ ಮಂಡಳಿ ಮುಂದಾಗಬೇಕೆಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹಾಗೂ ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಕಾಫಿ ಬೆಳೆಗಾರರ ಜೀವನಾಡಿಯಾಗಿದ್ದ ಎಬಿಸಿ ಕಾಫಿ ಟ್ರೇಂಡಿಂಗ್ ಕಂಪೆನಿ ಮಾಲಕ ವಿ.ಜಿ.ಸಿದ್ದಾರ್ಥ ಹೆಗಡೆ ಅವರನ್ನು ಜೀವಮಾನವಿಡಿ ಮರೆಯುವಂತಿಲ್ಲ. ಕಾಫಿ ಬೆಳೆಗಾರರಿಗೆ ಅವರು ನೀಡಿದ್ದ ಪ್ರೋತ್ಸಾಹ ಬದುಕಿಗೆ ಸಹಕಾರಿಯಾಗಿತ್ತು. ಅವರ ನಿಧನ ಜಿಲ್ಲೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸಹಸ್ರಾರು ಕೂಲಿಕಾರ್ಮಿಕ ಕುಟುಂಬಗಳು ಇಂದು ಬಡವಾಗಿದ್ದು, ಬೆಳೆಗಾರರ ಕುಟುಂಬಗಳು ಶೋಕಸಾಗರದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.

ವಿ.ಜಿ.ಸಿದ್ದಾರ್ಥ ಹೆಗಡೆಯವರು ಕಟ್ಟಿಬೆಳೆಸಿದ ಈ ಕಾಫಿ ಡೇ ಸಂಸ್ಥೆಗೆ ಬಹಳಷ್ಟು ಕಾಫಿಬೆಳೆಗಾರರು ತಾವು ಬೆಳೆದ ಕಾಫಿಯನ್ನು ಎಬಿಸಿಯಲ್ಲಿ ಮಾರಾಟಮಾಡಿ ಚೆಕ್‍ಗಳನ್ನು ಪಡೆದುಕೊಂಡಿದ್ದಾರೆ. ಸಿದ್ದಾರ್ಥ ಅವರು ಇದ್ದಾಗ ಬೆಳೆಗಾರರ ಯಾವುದೆ ವ್ಯವಹಾರಕ್ಕೆ ಕಿಂಚಿತ್ತು ಅಡಚಣೆ ಯಾಗದಂತೆ ಎಚ್ಚರಿಕೆ ವಹಿಸಿ ಸ್ಪಂದಿಸುತ್ತಿದ್ದರು. ಆದರೆ ಈಗ ಅಂದು ಎಬಿಸಿಯಲ್ಲಿ ಕಾಫಿ ಪಡೆದು ಚೆಕ್‍ಗಳಿಗೆ ಸಹಿ ಹಾಕಿದ ಅದೇ ಆಡಳಿತ ಮಂಡಳಿ ಸಿಬ್ಬಂದಿ ಕಚೇರಿಯಲ್ಲಿದ್ದರೂ ಆ ಚೆಕ್‍ಗಳು ಮಾತ್ರ ಇದುವೆರಗೂ ಹಣ ಪಾವತಿಯಾಗದಿರುವುದು ಅವರ ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ. ಸಂಸ್ಥೆ ನಷ್ಟದಲ್ಲಿದ್ದರೂ ಸಿದ್ದಾರ್ಥ ಅವರು ಸಿಬ್ಬಂದಿಗೆ ಮಾತ್ರ ಲಕ್ಷ, ಲಕ್ಷ ಸಂಬಳ ನೀಡಿ, ಕಾರು, ಬಂಗಲೆ ಕೊಟ್ಟು ಪೋಷಿಸಿದ್ದಾರೆ. ಇಂದು ಆ ಸಿಬ್ಬಂದಿ ಐಷರಾಮಿ ಜೀವನ ನಡೆಸುತ್ತ ಕೆಂಪನಿಯನ್ನು ನಷ್ಟಕ್ಕೆ ತಳ್ಳಲು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಷ್ಠೆ ಹಾಗೂ ಪ್ರಾಮಾಣಿಕ ರಂಗನಾಥ್ ರಾವ್ ಕೆಫೆಕಾಫಿ ಡೇ ಅಧ್ಯಕ್ಷರಾಗಿ ನೇಮಕವಾಗಿರುವುದು ಸ್ವಾಗತಾರ್ಹವಾಗಿದೆ. ರಾಜ್ಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಷ್ಠಾವಂತ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವುದು ರಾಜ್ಯದ ಜನರಿಗೆ ತಿಳಿದ ವಿಷಯ. ಹಾಗಾಗಿ ರಾಜ್ಯದಲ್ಲಿ ಕಾಫಿ ನೀಡಿ ಚೆಕ್ ಪಡೆದು ಹಣ ಪಾವತಿಯಾಗದೆ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಭೆ ಕರೆದು ಚರ್ಚಿಸಿ ಸಮಸ್ಯೆಗಳನ್ನು ಆಲಿಸಿ ಐಷರಾಮಿ ಜೀವನ ನಡೆಸುತ್ತಾ ಬೆಳೆಗಾರರರಿಗೆ ಉಡಾಫೆ ಉತ್ತರ ನೀಡುತ್ತಿರುವ ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದು ಸಿದ್ದಾರ್ಥಅವರು ಕಟ್ಟಿಬೆಳೆಸಿದ ಹೆಮ್ಮೆಯ ಸಂಸ್ಥೆಯನ್ನು ಉಳಿಸಬೇಕಾದರೆ ಇಂತಹ ಸಿಬ್ಬಂದಿಗಳಿಗೆ ಗೇಟ್‍ಪಾಸ್ ನೀಡಿ ಅದೇ ಸ್ಥಾನಕ್ಕೆ ನಿಷ್ಠಾವಂತ ಸಿಬ್ಬಂದಿಗಳನ್ನು ನಿಯೋಜಿಸಿದರೆ ಸಂಸ್ಥೆಗೆ ವ್ಯಯವಾಗುತ್ತಿರುವ ಕೊಟ್ಯಂತರ ರೂ ಹಣ ಉಳಿಯುತ್ತದೆ ಎಂದು ಹೇಳಿದ್ದಾರೆ. 

ಕೆಲವು ಐಷರಾಮಿ ಬೆಳೆಗಾರರು,ಉದ್ಯಮಿ,ಹಲವು ರಾಜಕಾರಣಿಗಳಿಗೆ ಸಿದ್ದಾರ್ಥ ಅವರು ನೀಡಿದ್ದ ನೂರಾರು ಕೋಟಿ ರೂ ಸಾಲ ಹಿಂಪಡೆಯಲು ಕೆಫೆ ಕಾಫಿಡೇ ಅಧ್ಯಕ್ಷರು ಎಚ್ಚೆತ್ತುಕೊಂಡರೆ ಕೆಂಪನಿಗೆ ಜೀವ ತುಂಬಲು ಸಹಕಾರಿಯಾಗುತ್ತದೆ ಎಂದು ಗಿರೀಸ್ ಪತ್ರಿಕಾ ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News