ಕೆಫೆ ಕಾಫಿಡೇ ಮಾಲಕ ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ನಿಧನ

Update: 2019-08-25 17:29 GMT

ಚಿಕ್ಕಮಗಳೂರು, ಆ.25: ಜಿಲ್ಲೆಯ ಕಾಫಿಗೆ ವಿಶ್ವಮಾನ್ಯತೆ ತಂದು ಕೊಟ್ಟಿದ್ದ, ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಅಕಾಲಿಕ ಸಾವಿನ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲಾಗದ ಸಿದ್ದಾರ್ಥ ಕುಟುಂಬಕ್ಕೆ ಮತ್ತೊಂದು ಅಘಾತ ರವಿವಾರ ಎದುರಾಗಿದೆ. ಸಿದ್ದಾರ್ಥ ಹೆಗ್ಡೆ ಅವರ ತಂದೆ, ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕಾಫಿ ಬೆಳೆಗಾರ ಗಂಗಯ್ಯ ಹೆಗ್ಡೆ(96) ರವಿವಾರ ನಿಧನರಾಗಿದ್ದು, ಸಿದ್ದಾರ್ಥ ಹೆಗ್ಡೆ ನಿಧನದ ದುಃಖದಿಂದ ಇನ್ನೂ ಹೊರಬಾರದ ಕುಟುಂಬಕ್ಕೆ ಗಂಗಯ್ಯ ಹೆಗ್ಡೆ ನಿಧನದ ಸುದ್ದಿ ಅಘಾತ ನೀಡಿದೆ.

ಕಳೆದೊಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಕೋಮಾ ಸ್ಥಿತಿಗೆ ತಲುಪಿದ್ದ ಗಂಗಯ್ಯ ಹೆಗ್ಡೆ ಅವರನ್ನು ಕುಟುಂಬಸ್ಥರು ಮೈಸೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ವಯೋ ಸಹಜ ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ರವಿವಾರ ಮಧ್ಯಾಹ್ನದ ವೇಳೆ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಮೃತ ಗಂಗಯ್ಯ ಹೆಗ್ಡೆ ಅವರ ಪಾರ್ಥಿವ ಶರೀರವನ್ನು ರವಿವಾರ ಸಂಜೆಯೇ ಮೈಸೂರಿನಿಂದ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಗ್ರಾಮಕ್ಕೆ ತರಲಾಗಿದ್ದು, ಅವರ ಮಗ ಸಿದ್ದಾರ್ಥ ಹೆಗ್ಡೆ ಅವರ ಸಮಾಧಿ ಪಕ್ಕದಲ್ಲೇ ಗಂಗಯ್ಯ ಹೆಗ್ಡೆ ಅವರ ಅಂತಿಮಸಂಸ್ಕಾರ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

ಮಗನ ಸಾವಿನ ಸುದ್ದಿ ತಿಳಿಯದೇ ನಿಧರಾದ ಹೆಗ್ಡೆ:
ಚಿಕ್ಕಮಗಳೂರಿನ ಪ್ರಸಿದ್ದ ಕಾಫಿಬೆಳೆಗಾರರಾಗಿದ್ದ ಗಂಗಯ್ಯ ಹೆಡ್ಡೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಅವರ ತಂದೆಯಾಗಿದ್ದಾರೆ. ಇತ್ತೀಚೆಗೆ ತನ್ನ ತಂದೆ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಸಿದ್ದಾರ್ಥ ಅವರೇ ಗಂಗಯ್ಯ ಹೆಗ್ಡೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಂದೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪ್ರತಿದಿನ ವೈದ್ಯರ ಬಳಿ ಆರೋಗ್ಯ ವಿಚಾರಿಸುತ್ತಿದ್ದ ಸಿದ್ದಾರ್ಥ ಹೆಗ್ಡೆ ಬಿಡುವಿಲ್ಲದ ಸಮಯದಲ್ಲೂ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ಮಧ್ಯೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಸಿದ್ದಾರ್ಥ ಅವರು ನೇತ್ರವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗ ಸಾವಿಗೆ ಶರಣಾದ ಸುದ್ದಿ ಮಾತ್ರ ಆಸ್ಪತ್ರೆಯಲ್ಲಿ ಕೋಮಸ್ಥಿತಿಯಲ್ಲಿದ್ದ ಗಂಗಯ್ಯ ಹೆಗ್ಡೆಗೆ ತಿಳಿಸಲು ಸಾಧ್ಯವಾಗಿರಲಿಲ್ಲ. ಸದ್ಯ ಗಂಗಯ್ಯ ಹೆಗ್ಡೆ ಅವರೂ ಇಹಲೋಕ ತ್ಯಜಿಸಿದ್ದು, ಮಗ ಸಿದ್ದಾರ್ಥ ಸಾವಿನ ಸುದ್ದಿಯನ್ನು ಕಡೆಗೂ ಅವರಿಗೆ ತಿಳಿಸದ ಕೊರಗು ಸಿದ್ದಾರ್ಥ ಅವರ ಕುಟುಂಬಸ್ಥರನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News