ಬಿದ್ದಂಡ ಸದ್ಗುರು ಸುಬ್ಬಯ್ಯ ನಿಧನ

Update: 2019-08-25 12:13 GMT

ಮಡಿಕೇರಿ, ಆ. 25: ಸೋಹಂ ಧ್ಯಾನಯೋಗ ಮಾರ್ಗದರ್ಶಕ, ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನದ ಅಧ್ಯಕ್ಷ ಬಿದ್ದಂಡ ಕೆ. ಸುಬ್ಬಯ್ಯ ಅವರು ಇಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಮೃತರಿಗೆ ಎಂಬತ್ತೆರಡು ವರ್ಷ ವಯಸ್ಸಾಗಿತ್ತು.

ಇಂದು ಬೆಂಗಳೂರಿನಲ್ಲಿ ಸತ್ಯಂಗ ಕಾರ್ಯಕ್ರಮ ನಿಯೋಜನೆಗೊಂಡಿತ್ತು. ಇದಕ್ಕೆ ತಯಾರಿ ನಡೆಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತೀವ್ರ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದರು.

ಕೊಡಗಿನ ನೆಲದಲ್ಲಿ ಅಗಸ್ತ್ಯ ಮಹರ್ಷಿಗಳ ತಪೋಬಲವಿದ್ದು, ಅದರ ಹಿರಿಮೆಯನ್ನು ಎಲ್ಲರೂ ಅರಿಯುವಂತಾಗಬೇಕು ಎನ್ನುತ್ತಿದ್ದ ಅವರು ಇತ್ತೀಚೆಗೆ ಅವರ 82ನೇ ಹುಟ್ಟುಹಬ್ಬವನ್ನು ಅನುಯಾಯಿಗಳು ಆಚರಿಸುವಾಗ ಆಚರಣೆಗೆ ಅಗಸ್ತ್ಯ ಎಂಬ ಹೆಸರನ್ನಿಟ್ಟು ಕಾರ್ಯಕ್ರಮ ಆಯೋಜಿಸಿದ್ದರು.

ದೇಶ – ವಿದೇಶಗಳಲ್ಲಿ ನೂರಾರು ಅನುಯಾಯಿಗಳನ್ನು ಹೊಂದಿದ್ದ ಅವರು ಸನಾತನ ಅದ್ವೈತ ತತ್ವದ ಅಪ್ಪಟ ಪ್ರತಿಪಾದಕರಾಗಿದ್ದು, ಧ್ಯಾನ ಯೋಗಕ್ಕೆ ಒತ್ತು ಕೊಡುತ್ತಿದ್ದರು. ದೈವದೊಡನೆ ಒಂದಾಗುವದೊಂದೇ ಜೀವನದ ಮೂಲ ಉದ್ದೇಶ ಎನ್ನುತ್ತಿದ್ದ ಅವರು ಪ್ರಾಪಂಚಿಕ ಬೇಡಿಕೆಗಳಿಗಾಗಿ ದೇವರಲ್ಲಿ ಪ್ರಾರ್ಥಿಸುವದನ್ನು ಖಂಡಿಸುತ್ತಿದ್ದರು.

ಸೂಫೀ ಪಂತ, ಜೈನ್ ಬುದ್ಧಿಜಂ, ಕಬಾಲ, ಇಸ್ಲಾಂ, ಕ್ರಿಶ್ಚಿಯನಿಜಂ, ಶೈವಯಿಜಂ, ಸಿಖ್ಖಿಜಂ ಹಾಗೂ ಎಲ್ಲ ಧರ್ಮಗಳ ತಿರುಳನ್ನು ಸತ್ಸಂಗಗಳಲ್ಲಿ ಬೋಧಿಸುತ್ತಿದ್ದ ಅವರು ಜಾತಿ – ಮತ ಮೀರಿದ ಅನುಯಾಯಿಗಳನ್ನು ಹೊಂದಿದ್ದರು.

ಬಿ.ಕೆ. ಸುಬ್ಬಯ್ಯ ಅವರು ಉತ್ತಮ ಕೃಷಿಕ, ಛಾಯಾಚಿತ್ರಕಾರ, ಕ್ರಿಕೆಟ್ ಹಾಗೂ ಟೆನಿಸ್ ಆಟಗಾರರಾಗಿದ್ದು, ವಾಂಡರರ್ಸ್ ಕ್ಲಬ್ಬಿನ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದರು. ರಾಜ್ಯ ಕ್ರಿಕೆಟ್ ತಂಡವನ್ನು ಶ್ರೀಲಂಕಾ ಹಾಗೂ ಇತರೆಡೆ ಪ್ರತಿನಿಧಿಸಿದ್ದರು.

ಸುಬ್ಬಯ್ಯ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.
ಕೊಡಗು ವಿದ್ಯಾಲಯಕ್ಕೆ ರಜೆ
ಮೃತರ ಗೌರವಾರ್ಥ ಸೋಮವಾರ ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News