ನನಗೆ ಯಾವುದೇ ಅಧಿಕಾರವೂ ಬೇಡ: ಡಿ.ಕೆ.ಶಿವಕುಮಾರ್

Update: 2019-08-25 13:07 GMT

ಬೆಂಗಳೂರು, ಆ. 25: ನನಗೆ ಯಾವುದೇ ಅಧಿಕಾರವೂ ಬೇಡ. ಪಕ್ಷದ ವಿಚಾರವಾಗಿ ಹೈಕಮಾಂಡ್ ಯಾವುದೇ ನಿರ್ಧಾರವನ್ನಾದರೂ ಕೈಗೊಳ್ಳಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಪಿಸಿಸಿ ಹುದ್ದೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ನನಗೆ ಯಾವುದಕ್ಕೂ ಆತುರ ಇಲ್ಲ. ಯಾರಿಗೆ ಅಧಿಕಾರ ಬೇಕು, ಯಾರಿಗೆ ಕಾರು ಬೇಕೋ, ಮನೆ ಬೇಕೋ ತೆಗದುಕೊಳ್ಳಲಿ ಎಂದರು.

ನನಗೆ ಪರ್ಮನೆಂಟ್ ಮನೆ ಇದೆ ಸಧ್ಯಕ್ಕೆ ಸಾಕು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾಳೆ ರಾಜ್ಯಕ್ಕೆ ನಮ್ಮ ಪಕ್ಷದ ಹಿರಿಯ ನಾಯಕರು ಬರುತ್ತಿದ್ದಾರೆ. ಅವರೇನು ತೀರ್ಮಾನ ಕೈಗೊಳ್ಳುವರೋ ನೋಡೋಣ’ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಹಾಗೂ ದೇವೇಗೌಡ ಕುಟುಂಬದ ನಡುವಣ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡರು ಏನೇನು ಮಾತನಾಡಿದ್ದಾರೆ ಗೊತ್ತಿಲ್ಲ. ಕೆಲವು ದಿನಗಳಿಂದ ನಾನು ಪತ್ರಿಕೆ ನೋಡಿಲ್ಲ. ಹೀಗಾಗಿ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ನಾನು ಒಬ್ಬ ಸಿಎಂ ಕೈಕೆಳಗೆ 14 ತಿಂಗಳು ಮಾಡಿದ್ದ ಕೆಲಸಕ್ಕೆ ಬದ್ಧನಾಗಿದ್ದೇನೆ ಎಂದ ಅವರು, ಅರುಣ್ ಜೇಟ್ಲಿ ಅವರು ಮಾದರಿ ರಾಜಕಾರಣಿ. ನಾನೂ ಎಷ್ಟೋ ಬಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕರ್ನಾಟಕ ರಾಜಕಾರಣದಲ್ಲಿ ಅಪಾರ ಆಸಕ್ತಿ ಹೊಂದಿದ್ದರು ಎಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News