ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣವಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ

Update: 2019-08-25 13:10 GMT

ಬೆಂಗಳೂರು, ಆ.25: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಪತನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣವಲ್ಲ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ನಡೆಸುವವರು ಸರಿಯಾಗಿ ನಡೆಸಬೇಕಿತ್ತು. ಆದರೆ, ಸರಕಾರ ಬೀಳಲು ಎರಡೂ ಪಕ್ಷಗಳೂ ಕಾರಣ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಶಾಸಕರನ್ನು ಮುಂಬೈಗೆ ಕಳುಹಿಸಿಲ್ಲ. ಒಂದು ವೇಳೆ ಅವರೇ ಶಾಸಕರನ್ನು ಮುಂಬೈಗೆ ಕಳುಹಿಸಿದ್ದಾರೆ ಎನ್ನುವುದಾದರೆ, ಜೆಡಿಎಸ್ ಶಾಸಕರು ಹೋಗಲು ಹೇಗೆ ಸಾಧ್ಯ ಎಂದರು.

ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದರು ಎಂದ ಅವರು, ಸರಕಾರ ಪತನ ಆದ ಮೇಲೆ ಏನು ಬೇಕಾದರೂ ಹೇಳಬಹುದು. ಆದರೆ, ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಕೆಪಿಎಸ್ಸಿ ಸದಸ್ಯರ ನೇಮಕಕ್ಕೆ ಸಿದ್ದರಾಮಯ್ಯ ಬೇಡಿಕೆ ಇಟ್ಟಾಗ, ಜೆಡಿಎಸ್ ತಿರಸ್ಕರಿಸಿತ್ತು. ಕಾಂಗ್ರೆಸ್‌ಗಿಂತಲೂ ಜೆಡಿಎಸ್ ಶಾಸಕರಿಗೆ ಬಜೆಟ್‌ನ ಅನುದಾನ ನೀಡಲಾಗಿತ್ತು. ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕಾಗಿ ಜಾತ್ಯತೀತ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಆನಂತರ ಉಂಟಾದ ಗೊಂದಲಗಳನ್ನು ಸರಿಪಡಿಸಿಕೊಂಡು ಸರಕಾರ ಉಳಿಸಿಕೊಳ್ಳಬೇಕಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News