ಚೂರಿ ಹಾಕುವ ವ್ಯಕ್ತಿತ್ವ ಸಿದ್ದರಾಮಯ್ಯನವರದ್ದಲ್ಲ: ಮಾಜಿ ಸಚಿವ ಚಲುವರಾಯಸ್ವಾಮಿ

Update: 2019-08-25 13:19 GMT

ಬೆಂಗಳೂರು, ಆ. 25: ‘ನಾನು ಗಮನಿಸಿರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರ ವ್ಯಕ್ತಿತ್ವದವರು. ಆದರೆ, ಅವರು ಯಾರ ಬೆನ್ನಿಗೆ ಚೂರಿ ಹಾಕುವವರಲ್ಲ’ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜತೆ ಜೆಡಿಎಸ್ ಪಕ್ಷದಲ್ಲಿದ್ದ ವೇಳೆ ಮತ್ತು ಈಗ ಕಾಂಗ್ರೆಸ್ ಪಕ್ಷದಲ್ಲಿಯೂ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಆದರೆ, ಮಾಜಿ ಸಿಎಂ ಎಚ್‌ಡಿಕೆ ದೇವೇಗೌಡ-ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಟ್ವೀಟ್ ಮಾಡಿ ಮಾತನಾಡುವುದಿಲ್ಲ ಎಂದಿದ್ದರು. ಇದೀಗ ಬಹಿರಂಗವಾಗಿ ಟೀಕಿಸಿದ್ದಾರೆಂದು ದೂರಿದರು.

ಇನ್ನು ಎಷ್ಟು ದಿನ ಅಂತ ಟೋಪಿ ಹಾಕುತ್ತಿರಾ? ನಿಮ್ಮ ಪಕ್ಷದ ಅಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ಸೇರಿದಂತೆ ಮೂರು ಶಾಸಕರು ಪಕ್ಷವನ್ನು ತ್ಯಜಿಸಿದ್ದು ಏಕೆ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣಕ್ಕೆ ಸರಕಾರ ಬೀಳುವಂತಾಯಿತು ಎಂದರು.

ಅಸ್ತಿತ್ವಕ್ಕೆ ಟೀಕೆ: ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಉಪ ಚುನಾವಣೆ ದೃಷ್ಟಿ ಇಟ್ಟುಕೊಂಡು ಹೀಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಈಗ ಎರಡೇ ಪಕ್ಷದ ಚರ್ಚೆಗಳು ಆಗುತ್ತಿವೆ. ಹೀಗಿರುವಾಗ ಜೆಡಿಎಸ್ ಅಸ್ತಿತ್ವ ಉಳಿಸಿಕ್ಕಾಗಿ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಹೀಗೆ ಅಂತ ಗೊತ್ತಿದ್ದರೂ ಯಾಕೆ ಅವರ ಜೊತೆ ಸೇರಿಕೊಂಡಿದ್ದು? ವಿಧಾನಸಭಾ ಚುನಾವಣೆ ವೇಳೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡಿದ್ದು. ಹೀಗಾಗಿ 25 ಸ್ಥಾನ ನಿಮಗೆ ಬಂತು. ಆಮೇಲೆ ನಮ್ಮ ಜೊತೆ ಬಂದು ಸರಕಾರ ರಚನೆ ಮಾಡಿ, ಬಿಜೆಪಿ ಮೋಸ ಮಾಡಿಲ್ಲವೇ ಎಂದು ಲೇವಡಿ ಮಾಡಿದರು.

ಎಲ್ಲ ಕಷ್ಟ ಸಹಿಸಿಕೊಂಡು ಸಿದ್ದರಾಮಯ್ಯ 14 ತಿಂಗಳು ಸರಕಾರ ನಡೆಸಿದರು. ಇದು ಅವರಿಗೆ ನೀವು ಕೊಡುತ್ತಿರುವ ಬಳುವಳಿಯೇ? ಎಂದ ಚಲುವರಾಯಸ್ವಾಮಿ, ನಾನು ಒಕ್ಕಲಿಗನಾಗಿ ಹೇಳುತ್ತಿದ್ದೇನೆ. ನಿಮ್ಮ ಪಕ್ಷ ಸಂಘಟನೆ ಬಗ್ಗೆ ಮಾತನಾಡಿಕೊಳ್ಳಿ. ಅದು ಬಿಟ್ಟು ಸಿದ್ದರಾಮಯ್ಯ ವಿರುದ್ಧ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ನ 14 ಮಂದಿ ಶಾಸಕರನ್ನು ಅನರ್ಹ ಮಾಡಿದ್ದು, ನಮ್ಮ ಪಕ್ಷಕ್ಕೆ ನಷ್ಟ ಆಗಿದೆ. ಲೋಕಸಭೆ ಚುನಾವಣೆ ಬಳಿಕ ಹೈಕಮಾಂಡ್ ಜೊತೆ ಮಾತನಾಡಿ ಬೆಂಬಲ ವಾಸಪ್ ಪಡೆಯಬೇಕೆಂದು ಸಿದ್ದರಾಮಯ್ಯ ಇದ್ದರು. ಆದರೆ ಚುನಾವಣೆ ಫಲಿತಾಂಶದಿಂದ ಹೈಕಮಾಂಡ್ ಮೇಲೆ ಒತ್ತಡ ಹಾಕುವುದಕ್ಕೆ ಅವರಿಗೆ ಆಗಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News