ನೆರೆಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ಶೀಘ್ರ ಪರಿಹಾರ ಬಿಡುಗಡೆಯ ಭರವಸೆ

Update: 2019-08-25 15:10 GMT

ಬೆಳಗಾವಿ, ಆ.25: ಉತ್ತರ ಕರ್ನಾಟಕ ಭಾಗದಲ್ಲಿ ನೆರೆಗೆ ತುತ್ತಾಗಿರುವ ಪ್ರದೇಶಗಳಿಗೆ ಸೂಕ್ತ ರೀತಿಯಲ್ಲಿ ಶೀಘ್ರದಲ್ಲಿಯೇ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ್ ಹೇಳಿದರು.

ರವಿವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಇಲ್ಲಿನ ಶೇಡಬಾಳ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಅತ್ಯಂತ ಕೆಟ್ಟ ಪರಿಸ್ಥಿತಿ ಕಂಡುಬಂದಿದೆ. ಕಬ್ಬಿನ ಬೆಳೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಧಾರಣೆಗೆ ಸಾಕಷ್ಟು ಸಮಯ ಬೇಕು ಎಂದು ತಿಳಿಸಿದರು.

ಪ್ರವಾಹ ಮತ್ತು ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ರಾಜ್ಯ ಸರಕಾರದ ಪರಿಹಾರ ಪ್ರಸ್ತಾವ(ಮನವಿ) ಆಧರಿಸಿ ಮತ್ತೊಮ್ಮೆ ಕೇಂದ್ರ ತಂಡವು ಪರಿಶೀಲನೆ ಕೈಗೊಳ್ಳಲಿದೆ. ಆ ತಂಡದ ವರದಿ ಆಧರಿಸಿ ಕೇಂದ್ರ ಸರಕಾರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದ ಅವರು, ಬೆಳೆಹಾನಿಯ ಸಮೀಕ್ಷೆ ನಡೆದಿದೆ ಎಂದರು.

ರಾಜ್ಯ ಸರಕಾರ ನಾಳೆಯೇ ಹಾನಿ ಕುರಿತ ಪ್ರಸ್ತಾವ ಸಲ್ಲಿಸಲಿದ್ದು, ನಂತರ ಎರಡನೆ ಭೇಟಿಯ ಬಗ್ಗೆ ಸಮಯ ನಿಗದಿಪಡಿಸಲಾಗುವುದು. ಪ್ರವಾಹಬಾಧಿತ ಜನರ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹಾಗೂ ಪುನರ್ವಸತಿ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಇದರಿಂದಾಗಿ ಜನ- ಜಾನು ವಾರುಗಳ ಜೀವರಕ್ಷಣೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮನವಿ: ಮೂರು ತಿಂಗಳು ಬತ್ತಿದ್ದ ಕೃಷ್ಣಾ ನದಿ ದಿಢೀರನೆ ಭೋರ್ಗರೆದು ರೈತರ ಬದುಕು ಹಾಳಾಯಿತು. ಪದೇ ಪದೇ ಪ್ರವಾಹದಿಂದ ಜಿಲ್ಲೆಯ ರೈತರಿಗೆ ನಿರಂತರ ಹಾನಿಯಾಗುತ್ತಿದೆ. ರಾಜ್ಯಕ್ಕೆ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಹಾನಿಯಾಗಿದೆ. ಇದನ್ನು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇದೇ ವೇಳೆ ಅಧ್ಯಯನ ತಂಡ ಸದಸ್ಯರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ವಿತ್ತ ಇಲಾಖೆಯ ಎಫ್‌ಸಿಡಿ ನಿರ್ದೇಶಕ ಎಸ್.ಸಿ.ಮೀನಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News