ಕರ್ತಾರ್‌ಪುರ ಕಾರಿಡಾರ್ ಕಾರ್ಯ ಅಬಾಧಿತ: ಪಾಕಿಸ್ತಾನ

Update: 2019-08-25 15:18 GMT

ಇಸ್ಲಾಮಾಬಾದ್,ಆ.25: ಭಾರತದ ಜೊತೆಗಿನ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಿದ್ದರೂ ಬಾಬಾ ಗುರು ನಾನಕರ 550ನೇ ಜನ್ಮದಿನಾಚರಣೆಗೂ ಮೊದಲು ಸಿಖ್ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ತಾರ್‌ಪುರ ಕಾರಿಡರ್ ಯೋಜನೆಯನ್ನು ಸಂಪೂರ್ಣಗೊಳಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಪಾಕ್ ಪ್ರಧಾನಿಯ ಹಿರಿಯ ಸಹಾಯಕ ಅಧಿಕಾರಿ ತಿಳಿಸಿದ್ದಾರೆ.

ಕರ್ತಾರ್‌ಪುರ ಸಿಖ್ಖರ ಪವಿತ್ರ ಸ್ಥಳವಾಗಿದ್ದು ಅಂತರ್ಧರ್ಮೀಯ ನಂಬಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪಾಕ್ ಪ್ರಧಾನಿಯ ವಿಶೇಷ ಸಹಾಯಕಿ ಫಿರ್ದೌಸ್ ಆಶಿಕ್ ಅವನ್ ಟ್ವೀಟ್ ಮಾಡಿದ್ದಾರೆ. ಭಾರತ-ಪಾಕ್ ನಡುವಿನ ಸಂಬಂಧ ಹಳಸಿರುವ ಕಾರಣ ಕರ್ತಾರ್‌ಪುರ ಕಾರಿಡಾರ್‌ನ ಕಾಮಗಾರಿ ಸ್ಥಗಿತಗೊಂಡಿದೆ ಎಂಬ ಸುದ್ದಿಯನ್ನು ತಳ್ಳಿಹಾಕಿದ ಅವನ್, ಭಯ ದೇಶಗಳ ನಡುವಿನ ಸಂಬಂಧ ಹೇಗಿದ್ದರೂ ಸಿಖ್ ಯಾತ್ರಾರ್ಥಿಗಳು ಕರ್ತಾರ್‌ಪುರ ಆಗಮಿಸಲು ಪಾಕಿಸ್ತಾನ ಎಂದೂ ಬಾಗಿಲು ತೆರೆದೇ ಇರುತ್ತದೆ ಎಂದು ತಿಳಿಸಿದ್ದಾರೆ.

ತೀವ್ರವಾದ ಮತ್ತು ಅಸಹಿಷ್ಣುತೆ ಹೆಚ್ಚುತ್ತಿರುವ ಈ ಜಗತ್ತಿನಲ್ಲಿ ಕರ್ತಾರ್‌ಪುರ ಕಾರಿಡಾರ್ ಗೌರವ ಮತ್ತು ಸಹಿಷ್ಣುತೆಯ ಸಂದೇಶ ನೀಡುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಧ್ವಜದಲ್ಲಿರುವ ಬಿಳಿ ಬಣ್ಣ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುತ್ತದೆ ಮತ್ತು ಈ ಬಣ್ಣವು ಸರಕಾರಕ್ಕೆ ಹಸಿರಿನಷ್ಟೇ ಆಪ್ತವಾಗಿದೆ. ಕರ್ತಾರ್‌ಪುರ ಕಾರಿಡಾರನ್ನು ಭಾರತದ ಜೊತೆಗಿನ ಮಾತುಕತೆಯ ವೇಳೆ ಅಂತಿಮಗೊಳಿಸಿದ ನವಂಬರ್ ತಿಂಗಳಲ್ಲೇ ಉದ್ಘಾಟಿಸಲಾಗುವುದು ಎಂದು ಅವನ್ ಮಾಹಿತಿ ನೀಡಿದ್ದಾರೆ.

ಕರ್ತಾರ್‌ಪುರ ಕಾರಿಡಾರ್ ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್‌ಗೆ ಭಾರತದ ಗರುದಾಸ್‌ಪುರದಲ್ಲಿರುವ ಡೇರ ಬಾಬಾ ನಾನಕ್ ಮಂದಿರದ ಜೊತೆ ಸಂಪರ್ಕ ಸಾಧಿಸಲಿದೆ. ಈ ಕಾರಿಡಾರ್ ಮೂಲಕ 1522ರಲ್ಲಿ ಬಾಬಾ ಗುರು ನಾನಕ್ ಅವರಿಂದ ನಿರ್ಮಿಸಲ್ಪಟ್ಟ ಕರ್ತಾರ್‌ಪುರ ಸಾಹಿಬ್‌ಗೆ ಭಾರತೀಯ ಸಿಖ್ ಯಾತ್ರಾರ್ಥಿಗಳು ವೀಸಾರಹಿತವಾಗಿ ತೆರಳಲು ಸಾಧ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News