ಸಹಕಾರಿ ಬ್ಯಾಂಕ್‌ಗಳು ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಲಿ: ಮಾಜಿ ಸಚಿವ ಎಚ್.ಕೆ.ಪಾಟೀಲ್

Update: 2019-08-25 15:27 GMT

ಬೆಂಗಳೂರು, ಆ.25: ಮಹಿಳಾ ಸಹಕಾರಿ ಬ್ಯಾಂಕ್‌ಗಳು, ಲಾಭದ ದೃಷ್ಟಿಯಿಂದ ಅಲ್ಲದೆ ಮಹಿಳಾ ಉದ್ಯೋಗ ಸೃಷ್ಟಿಸುವ ಕಡೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ರವಿವಾರ ನಗರದ ಟೌನ್‌ಹಾಲ್‌ನಲ್ಲಿ ಲಕ್ಷ್ಮಿ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತದ ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಬ್ಯಾಂಕ್‌ಗಳು ಶರವೇಗದಲ್ಲಿ ಬೆಳೆದವು. ಆದರೆ, ಸಹಕಾರಿ ಬ್ಯಾಂಕ್‌ಗಳು ಇಂದಿಗೂ ವೃದ್ಧಿಯಾಗದೇ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈ ಹಿಂದೆ ಮಹಿಳಾ ಬ್ಯಾಂಕ್‌ಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅದು ಫಲ ನೀಡಲಿಲ್ಲ. ಇದೀಗ ರಾಜ್ಯಾದ್ಯಂತ ಬೆರಳಣಿಕೆಯಷ್ಟು ಮಹಿಳಾ ಸಹಕಾರಿ ಬ್ಯಾಂಕ್‌ಗಳು ಉಳಿದುಕೊಂಡಿವೆ. ಆದರೆ, ಇವೂ ಅಷ್ಟೊಂದು ಸಧೃಡವಾಗಿಲ್ಲ ಎಂದು ಅವರು ತಿಳಿಸಿದರು.

ಇತ್ತೀಚಿಗೆ ಬ್ಯಾಂಕ್‌ಗಳ ನಿಬಂಧನೆಗಳನ್ನು ಸರಳೀಕರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಹಿಳಾ ಸಹಕಾರಿ ಬ್ಯಾಂಕ್‌ಗಳು ಉನ್ನತಿಯತ್ತ ಹೆಜ್ಜೆ ಇಡಬೇಕಾಗಿದೆ. ರಾಜ್ಯದಲ್ಲಿ 260 ಕ್ಕೂ ಅಧಿಕ ಬ್ಯಾಂಕ್‌ಗಳಿದ್ದು, 400 ಕೋಟಿಗೂ ಅಧಿಕ ಲಾಭ, ಐದು ಕೋಟಿಯಷ್ಟು ಬಂಡವಾಳದಲ್ಲಿ ಹೆಜ್ಜೆಯನ್ನಿಟ್ಟಿವೆ. ಇದು ಉತ್ತಮ ಬೆಳವಣಿಗೆಯಾಗಿದ್ದು, ಮತ್ತಷ್ಟು ಗಟ್ಟಿಯಾಗಬೇಕಿದೆ ಎಂದರು.

ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಮಹಿಳೆಯರ ಸಶಕ್ತ ಏಳಿಗೆಗಾಗಿ ಜಿಲ್ಲೆಗೊಂದು ಮಹಿಳಾ ಸಹಕಾರ ಬ್ಯಾಂಕ್ ಅನ್ನು ರಾಜ್ಯ ಸರಕಾರ ಸ್ಥಾಪನೆ ಮಾಡಿದೆ. ಇವುಗಳು ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಕಡಿಮೆಯಿಲ್ಲದಂತೆ ಕೆಲಸ ಮಾಡಬೇಕು. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಕರ್ಷಿಸಬೇಕು ಎಂದು ನುಡಿದರು.

ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮಾಡಿದ ಪ್ರತಿಯೊಬ್ಬ ಸದಸ್ಯೆಗೂ ಸದಸ್ಯತ್ವದ ಹಕ್ಕು ಇರುತ್ತದೆ. ಆದರೆ, ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ, ಖಾಸಗಿ ಬ್ಯಾಂಕ್‌ಗಳಲ್ಲಿ ಇಂತಹ ವ್ಯವಸ್ಥೆಯಿಲ್ಲ. ಇಲ್ಲಿ ಎಲ್ಲವನ್ನೂ ನಾವೇ ಕಟ್ಟಿಕೊಂಡಿರುತ್ತೇವೆ. ನಮ್ಮದೇ ಜವಾಬ್ದಾರಿ ಹಾಗೂ ನಾಯಕತ್ವವೂ ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಟ್ಟಣ ಸಹಕಾರಿ ಸಂಗದ ಸದಸ್ಯ ಕೃಷ್ಣಾ, ಬ್ಯಾಂಕ್ ಅಧ್ಯಕ್ಷೆ ವಿ.ಕಮಲಾ, ನಿರ್ದೇಶಕರಾದ ಎಂ.ಎಂ.ತೇಜಾವತಿ ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News