ಪ್ರಜಾಪ್ರಭುತ್ವಪರ ನಡೆ: ಹಾಂಗ್‌ಕಾಂಗ್‌ನಲ್ಲಿ ಪೊಲೀಸ್, ಪ್ರತಿಭಟನಾಕಾರರ ಮಧ್ಯೆ ಸಂಘರ್ಷ

Update: 2019-08-25 15:31 GMT

ಹಾಂಗ್‌ಕಾಂಗ್,ಆ.25: ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಹೋರಾಟ ಮುಂದುವರಿದಿದ್ದು ರವಿವಾರ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸಿದರು. ಒಂದೆಡೆ ಪ್ರತಿಭಟನಾಕಾರರ ದೊಡ್ಡ ಗುಂಪೊಂದು ಸಮೀಪದ ಉದ್ಯಾನವನದಲ್ಲಿ ರ್ಯಾಲಿ ನಡೆಸಿದರೆ ಮತ್ತೊಂದೆಡೆ ಇನ್ನೊಂದು ಗುಂಪು ಬಿದಿರು, ಕಬ್ಬಿಣದ ಸರಳುಗಳನ್ನು ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಪೊಲೀಸರನ್ನು ತಬ್ಬಿಬ್ಬುಗೊಳಿಸಲು ಪ್ರಯತ್ನಿಸಿತು.

ಮೊದಲು ಎಚ್ಚರಿಕೆ ನೀಡಿದ ಪೊಲೀಸರು ಪ್ರತಿಭಟನಾಕಾರರು ಕದಲದಿರುವುದನ್ನು ಕಂಡು ಅವರ ಮೇಲೆ ಅಶ್ರುವಾಯುವನ್ನು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಆಕ್ರೋಶಿತ ಪ್ರತಿಭಟನಾಕಾರರು ಪೊಲೀಸರತ್ತ ಇಟ್ಟಿಗೆ ಮತ್ತು ಸೀಮೆಎಣ್ಣೆ ಬಾಂಬ್‌ಗಳನ್ನು ಎಸೆದು ಪ್ರತಿಕ್ರಿಯಿಸಿದರು. ಇದರ ಫಲವಾಗಿ ನಗರವಿಡೀ ಹೊಗೆ ಮತ್ತು ಇಟ್ಟಿಗೆಯಿಂದ ಮುಚ್ಚಿ ಹೋಗುವಂತೆ ಕಾಣುತ್ತಿತ್ತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಸಂಘರ್ಷಕ್ಕೂ ಮೊದಲು ಮಳೆಯ ಮಧ್ಯೆಯೂ ಕೊಡೆ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾದ ಸಾವಿರಾರು ಜನರು ರ್ಯಾಲಿಯ ಕೊನೆಯ ಸ್ಥಳ ಸೆನ್ ವನ್ ಪಾರ್ಕ್‌ನಲ್ಲಿ ಜಮಾವಣೆಗೊಂಡರು ಮತ್ತು ಸ್ವಾತಂತ್ರಕ್ಕಾಗಿ ಹೋರಾಡಿ, ಹಾಂಗ್‌ಕಾಂಗ್ ಜೊತೆ ನಿಲ್ಲಿ ಎಂಬ ಘೋಷಣೆಯನ್ನು ಕೂಗಿದರು ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಈ ತಿಂಗಳ ಆರಂಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ದಾಳಿ ನಡೆಸಿದ ಸ್ಥಳ ಕ್ವೈ ಫೊಂಗ್ ರೈಲು ನಿಲ್ದಾಣ ಸದ್ಯ ಹಾಂಗ್‌ಕಾಂಗ್ ಪ್ರತಿಭಟನಾಕಾರರ ಕೇಂದ್ರ ಸ್ಥಳವಾಗಿ ಬದಲಾಗಿದೆ.

ಈ ಸ್ಥಳದಲ್ಲಿ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು ಯಾವುದೇ ರೀತಿಯ ಉದ್ವಿಗ್ನತೆ ತಲೆದೋರದಂತೆ ಎಚ್ಚರಿಕೆವಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಾಕ್ಸ್: ಪ್ರತಿಭಟನಾಕಾರರು ಚೀನಾದ ಅರೆಸ್ವಾಯತ್ತ ಪ್ರದೇಶದ ರಸ್ತೆಗಳಲ್ಲಿ ಎರಡು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಸತಾತ್ಮಕ ಚುನಾವಣೆ ಮತ್ತು ಪ್ರತಿಭಟನೆಯನ್ನು ಕೊನೆಗೊಳಿಸಲು ಪೊಲೀಸರಿಂದ ಶಕ್ತಿಯ ಬಳಕೆಯ ತನಿಖೆ ನಡೆಸಬೇಕು ಎನ್ನುವುದು ಈ ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News