ಜಮ್ಮು ಕಾಶ್ಮೀರದಲ್ಲಿ ಶಿಶು ಆಹಾರದ ಕೊರತೆ ಇದೆ: ಒಪ್ಪಿಕೊಂಡ ಆಡಳಿತ

Update: 2019-08-25 16:38 GMT

ಶ್ರೀನಗರ, ಆ. 25: ಕೇಂದ್ರಾಡಳಿತ ಪ್ರದೇಶದಲ್ಲಿ ಮುಂದಿನ 15ರಿಂದ 20 ದಿನಗಳಿಗೆ ಬೇಕಾದ ಎಲ್ಲ 376 ಸೂಚಿತ ಹಾಗೂ 62 ಅತ್ಯಗತ್ಯದ ಅಥವಾ ಜೀವ ರಕ್ಷಕ ಔಷಧಗಳು ಲಭ್ಯ ಇವೆ ಎಂದು ಜಮ್ಮು ಹಾಗೂ ಕಾಶ್ಮೀರ ಆಡಳಿತ ರವಿವಾರ ಪ್ರಕಟಿಸಿದೆ. ಆದರೆ, ಕಳೆದ ಎರಡು ದಿನಗಳಲ್ಲಿ ಶಿಶು ಆಹಾರದ ಕೊರತೆ ಇದೆ ಎಂಬುದನ್ನು ಆಡಳಿತ ಒಪ್ಪಿಕೊಂಡಿದೆ.

ಈ ಸಮಸ್ಯೆ ಪರಿಹರಿಸಲಾಗುವುದು ಹಾಗೂ ಹೊಸ ದಾಸ್ತಾನು ಸ್ವೀಕರಿಸಲಾಗುವುದು ಎಂದು ಆಡಳಿತ ಹೇಳಿದೆ. ಮುಂದಿನ ಮೂರು ವಾರಗಳಿಗೆ ಬೇಕಾಗುವಷ್ಟು ಶಿಶು ಆಹಾರದ ದಾಸ್ತಾನು ಇದೆ ಎಂದು ಆಡಳಿತದ ಹೇಳಿಕೆ ತಿಳಿಸಿದೆ. ಔಷಧಗಳ ಹೆಚ್ಚಿನ ವಿತರಕರು ಜಮ್ಮು ಮೂಲದವರು. ಒಂದು ಬಾರಿ ಆದೇಶ ನೀಡಿದರೆ ಔಷಧ ಪೂರೈಸಲು 14ರಿಂದ 18 ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಆಡಳಿತ ಹೇಳಿದೆ.

ಔಷಧ ಹಾಗೂ ಶಿಶು ಆಹಾರವನ್ನು ತ್ವರಿತವಾಗಿ ರವಾನಿಸಲು ಚಂಡಿಗಢ ಹಾಗೂ ಜಮ್ಮುವಿನಲ್ಲಿ ತಲಾ ಮೂವರು ವ್ಯಕ್ತಿಗಳನ್ನು ನಿಯೋಜಿಸಲಾಗಿದೆ ಎಂದು ಆಡಳಿತ ತಿಳಿಸಿದೆ. ಎಲ್ಲ 376 ಔಷಧಗಳು ಸರಕಾರಿ ಹಾಗೂ ಖಾಸಗಿ ಮೆಡಿಕಲ್‌ಗಳಲ್ಲಿ ಲಭ್ಯವಿದೆ. ಕನಿಷ್ಠ 62 ಅತ್ಯಗತ್ಯದ ಹಾಗೂ ಜೀವ ರಕ್ಷಕ ಔಷಧಗಳು ಕೂಡ ಲಭ್ಯವಿದೆ. ಎರಡೂ ವರ್ಗದ ಔಷಧಗಳ ದಾಸ್ತಾನು 15ರಿಂದ 20 ದಿನಗಳಿಗೆ ಬೇಕಾಗುವಷ್ಟು ಇದೆ ಎಂದು ಆಡಳಿತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News