ಈಸೂರು ಚಳವಳಿಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಗಂಗಯ್ಯ ಹೆಗ್ಡೆ

Update: 2019-08-25 17:35 GMT

ಚಿಕ್ಕಮಗಳೂರು, ಆ.25: ರವಿವಾರ ಮಧ್ಯಾಹ್ನ ನಿಧನರಾದ ಜಿಲ್ಲೆಯ ಪ್ರಸಿದ್ಧ ಕಾಫಿಬೆಳೆಗಾರ, ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ದೇಶದ ಸ್ವಾತಂತ್ರ್ಯ ಚಳವಳಿಯ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ದಾಖಲಾಗಿರುವ ಈಸೂರು ಚಳವಳಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಗಂಗಯ್ಯ ಹೆಡ್ಡೆ ಅವರೂ ಒಬ್ಬರಾಗಿದ್ದರು ಎಂಬುದು ಜಿಲ್ಲೆಯಲ್ಲಿ ಹೆಚ್ಚು ಜನರಿಗೆ ತಿಳಿದಿಲ್ಲ.

ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿಯ ತನೂಡಿ ಗ್ರಾಮದ ವೀರಪ್ಪ ಹೆಗ್ಡೆ ಹಾಗೂ ಶೇಷಮ್ಮ ದಂಪತಿ ಮಗನಾಗಿದ್ದ ಗಂಗಯ್ಯ ಹೆಗ್ಡೆ ಫೆ.6, 1924ರಂದು ತನೂಡಿಯಲ್ಲಿ ಜನಿಸಿದ್ದರು. ನಾಲ್ಕು ವರ್ಷ ಆಗುವಷ್ಟರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದ ಗಂಗಯ್ಯ ಹೆಗ್ಡೆ ತಾಯಿ ಶೇಷಮ್ಮ ಅವರ ಆರೈಕೆಯಲ್ಲಿ ಬೆಳೆದಿದ್ದರು. ಗಂಗಯ್ಯ ಹೆಗ್ಡೆಯನ್ನು ವಿದ್ಯಾವಂತನನ್ನಾಗಿಸುವುದು ತಾಯಿ ಶೇಷಮ್ಮ ಅವರ ಹೆಬ್ಬಯಕೆಯಾಗಿತ್ತು. ಆದ್ದರಿಂದ ಆರಂಭಿಕ ಶಿಕ್ಷಣವನ್ನು ಮೂಡಿಗೆರೆ ಹಾಗೂ ಕೊಪ್ಪದಲ್ಲಿ ಪೈರೈಸಿದ ಗಂಗಯ್ಯ ಹೆಗ್ಡೆ, ಹೈಸ್ಕೂಲನ್ನು ಚಿಕ್ಕಮಗಳೂರು ನಗರದಲ್ಲಿ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಪೂರೈಸಿದ್ದರು.

1939-1941ರ ಅವಧಿ ದೇಶಾದ್ಯಂತ ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಕಾವು ಪಡೆದುಕೊಂಡಿದ್ದ ಕಾಲ. ಇದೇ ಅವಧಿಯಲ್ಲಿ ಅಂದರೆ 1942ರಲ್ಲಿ ಗಂಗಯ್ಯ ಹೆಗ್ಡೆ ಇಂಟರ್‍ಮೀಡಿಯೆಟ್ ವ್ಯಾಸಂಗಕ್ಕಾಗಿ ಶಿವಮೊಗ್ಗಕ್ಕೆ ತೆರಳಿ ಹಾಸ್ಟೆಲ್‍ನಲ್ಲಿ ತಂಗಿದ್ದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ವಿದ್ಯಾಭ್ಯಾಸದ ಸಲುವಾಗಿ ತಂಗಿದ್ದ ಮಲೆನಾಡಿದ ದೇಶಭಕ್ತ ಯುವಕರ ಒಂದು ಗುಂಪು ವಿದ್ಯಾಭ್ಯಾಸ ಮಾಡಿದ್ದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ ಚಳವಳಿಗಳಲ್ಲಿ ಪಾಲ್ಗೊಂಡಿದ್ದೇ ಹೆಚ್ಚು. ಸ್ವಾತಂತ್ರ್ಯ ಕಿಚ್ಚು ಹೆಚ್ಚಿದ್ದ ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದಲ್ಲಿ ನಡೆದ ಚಳವಳಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಹೋರಾಟವಾಗಿದೆ.

ಕಾಲೇಜು ದಿನಗಳಲ್ಲಿ ದೇಶಭಕ್ತಿಯ ಗುಣಗಳನ್ನು ಬೆಳೆಸಿಕೊಂಡಿದ್ದ ಗಂಗಯ್ಯ ಹೆಗ್ಡೆ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಅವರ ಸ್ವಾತಂತ್ರ್ಯ ಚಳವಳಿ ಕೂಗಿಗೆ ಧ್ವನಿಗೂಡಿಸಿದ್ದರು. 1942ರಲ್ಲಿ ಗಾಂಧೀಜಿ ಅವರ "ಮಾಡು ಇಲ್ಲವೇ ಮಡಿ" ಚಳವಳಿಗೆ ಬೆಂಬಲ ಸೂಚಿಸಲು ಶಿವಮೊಗ್ಗದ ದೇಶಭಕ್ತ ಸ್ವಾತಂತ್ರ್ಯ ಚಳವಳಿಯ ಮುಖಂಡರೊಂದಿಗೆ ವಕೀಲರು, ವಿದ್ಯಾರ್ಥಿಗಳು ನಗರದ ದುರ್ಗಿಗುಡಿ ಮುಂಭಾಗ ಸೇರಿದ್ದರು. ವಿದ್ಯಾರ್ಥಿಯಾಗಿದ್ದ ಗಂಗಯ್ಯ ಹೆಗ್ದೆ ಅಂದು ತರಗತಿಗೆ ಚಕ್ಕರ್ ಹೊಡೆದು ಕೊಡಗಿನ ನಾಣಿ ಮತ್ತಿತರ ಸಂಗಡಿಗರೊಂದಿಗೆ ದುರ್ಗಿಗುಡಿಯ ಆಂದೋಲನ ಸೇರಿಕೊಂಡು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು.

1942ರಲ್ಲಿ ಬ್ರಿಟಿಷರು ಈಸೂರನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರು. ರೊಚ್ಚಿಗೆದ್ದ ಹೋರಾಟಗಾರರು "ಏಸೂರನ್ನಾದರೂ ಕೊಟ್ಟೆವು, ಈಸೂರನ್ನು ಕೊಡಲಾರೆವು" ಎಂದು ಚಳವಳಿ ಆರಂಭಿಸಿದ್ದರು. ಈಸೂರು ಗ್ರಾಮದ ನಾಗರಿಕರು ಕ್ರಾಂತಿಕಾರಿಗಂಳಂತೆ ಚಳುವಳಿಯಲ್ಲಿ ತೊಡಗಿದ್ದಾಗ ಬ್ರಿಟಿಷ್ ಆಡಳಿತಾಂಗ, ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ಮತ್ತು ಅಮಲ್ದಾರ್ ರೊಬ್ಬರನ್ನು ಊರಿನ ಪರಿಸ್ಥಿತಿಯ ಅಧ್ಯಯನಕ್ಕೆ ಕಳುಹಿಸಿತ್ತು. ಅದಾಗಲೇ ಬ್ರಿಟಿಷರ ದೌರ್ಜನ್ಯದಿಂದ ಸಹನೆಕಳೆದುಕೊಂಡಿದ್ದ ಈಸೂರು ಗ್ರಾಮಸ್ಥರು ಅಧಿಕಾರಿಗಳಿಬ್ಬರನ್ನು ಕಟ್ಟಿ ಹಾಕಿ ಅಮಾನುಷವಾಗಿ ಕೊಲೆ ಮಾಡಿದರು. ಈಸೂರು ಹೋರಾಟಗಾರರೊಂದಿಗಿದ್ದ ಗಂಗಯ್ಯ ಹೆಗ್ಡೆ ಹಾಗೂ ಅವರ ಸಂಗಡಿಗರು ಈ ಘೋರ ಹತ್ಯೆಯನ್ನು ಕಣ್ಣಾರೆ ಕಂಡಿದ್ದರು. ಗ್ರಾಮಸ್ಥರ ಈ ವರ್ತನೆಯಿಂದ ರೊಚ್ಚಿಗೆದ್ದ ಪೊಲೀಸರು ಹಿಂಸಾಚಾರವನ್ನು ನಡೆಸಲು ಪ್ರಾರಂಭಿಸಿದ್ದರು. ಗಂಗಯ್ಯ ಹೆಗ್ಡೆ ಚಳವಳಿಯಲ್ಲಿ ಪಾಲ್ಗೊಂಡಿದ್ದರಿಂದ ಬ್ರಿಟಿಷರಿಂದ ಲಾಠಿ ಏಟು ತಿಂದಿದ್ದರು. ನಂತರ ಕೊನೆಗೆ ಬ್ರಿಟಿಷರ ಕೆಂಗೆಣ್ಣಿಗೆ ಗುರಿಯಾಗಿ ಭೂಗತರಾಗಿದ್ದರೆಂಬುದು ಕಾಫಿ ನಾಡಿನ ಜನರಿಗೆ ತಿಳಿದಿರುವ ಸಂಗತಿಯಾಗಿದೆ.

ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗಂಗಯ್ಯ ಹೆಗ್ಡೆ ತಮ್ಮ 96ರ ವಯಸ್ಸಿನಲ್ಲೂ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ 18ರ ಯುವಕನಂತೆ ತಮ್ಮ ಕುಟುಂಬದವರೊಂದಿಗೆ ಸಮಾಜಸೇವಾ ಕಾರ್ಯಗಳೊಂದಿಗೆ ವಿರಮಿಸುತ್ತಿದ್ದರು. ಇತ್ತೀಚೆಗಷ್ಟೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ದೇಶದ ಕಾಫಿ ಉದ್ಯಮದ ದೊರತೆಯಂತ್ತಿದ್ದ ಸಿದ್ದಾರ್ಥ ಹೆಗ್ಡೆ ಹಾಗೂ ಅವರ ತಂದೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಗಂಗಯ್ಯ ಹೆಗ್ಡೆ ಅವರನ್ನು ಕಳೆದುಕೊಂಡ ಜಿಲ್ಲೆಯ ಜನರು ಎಲ್ಲೆಡೆ ಕಂಬನಿ ಮಿಡಿಯುತ್ತಿದ್ದಾರೆ.

ಸ್ವಾತಂತ್ರ್ಯ ಚಳವಳಿ ಸಂದರ್ಬದಲ್ಲಿ ಮೈಸೂರಿಗೆ ನೂತನ ಅರಸರಾಗಿ ಜಯಚಾಮರಾಜೇಂದ್ರ ಅರಸರು ನೇಮಕ ಗೊಂಡಿದ್ದ ಅವಧಿಯಲ್ಲಿ ಅವರೊಮ್ಮೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಕಾಲೇಜು ಸಂಘದ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಗಂಗಯ್ಯ ಹೆಗ್ಡೆ ಸೇರಿದಂತೆ  ಮಲೆನಾಡಿನವರಾದ ಮಾಕೋನಹಳ್ಳಿಯ ಎಂ.ಯು.ಚಂದ್ರೇಗೌಡ, ಶಿವನಗದ್ದೆ ಆರಾಧ್ಯ, ಕೊಪ್ಪದ ದೇವೇಗೌಡ, ಬಿ.ಇ.ಕೃಷ್ಣೆಗೌಡ, ಬೂಪಾಲ್ ಚಂದ್ರಶೇಖರ್, ಶಂಕರಯ್ಯ ಹೆಗಡೆ, ಕರಗಡ ಅನಂತರಾಮಯ್ಯ, ಆರ್ಡಿಕೊಪ್ಪ ಗಣೇಶ್ ರಾವ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಶಿವಮೊಗ್ಗದ ಮುಖ್ಯರಸ್ತೆಯಲ್ಲಿ ಅಡ್ಡನಿಂತು ರಾಜರ ಆಳ್ವಿಕೆ ವಿರುದ್ಧ ಹಾಡು ಹಾಡಿ, ಈಸೂರಿನಲ್ಲಿ ಬಂಧಿತರಾಗಿರುವ ನಿರಪರಾಧಿಗಳನ್ನು ಬಿಡುಗೊಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News