ಅಪರೂಪದ ಕಾಯಿಲೆಗೆ ಯಶಸ್ವಿ ಮೂತ್ರಪಿಂಡ ಕಸಿ

Update: 2019-08-25 18:05 GMT

ಬೆಂಗಳೂರು, ಆ. 25: ಮೂತ್ರಪಿಂಡದ ಅನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ನಗರದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಹೊಸ ಬದುಕು ನೀಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಎಸ್.ನರೇಂದ್ರ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರೂಪದ ಕಾಯಿಲೆಯಾದ ಎಡಿಪಿಕೆಡಿಯಿಂದ ಬಳಲುತ್ತಿರುವವರಿಗೆ ಮೂತ್ರಪಿಂಡ ಕಸಿ ತುಂಬಾ ಸವಾಲಿನ ಕೆಲಸ. ಏಕೆಂದರೆ, ಮೂತ್ರಪಿಂಡದ ಗಾತ್ರ ದೊಡ್ಡದಾಗಿರುವುದರಿಂದ ಅಲ್ಲಿ ಕಸಿ ಮಾಡಲು ಜಾಗವೇ ಇರುವುದಿಲ್ಲ. ಇಂತಹ ಸ್ಥಿತಿ ಇದ್ದಾಗ್ಯೂ ನಾವು ರೋಗಿ ನವೀನ್‌ಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಡಾ.ಅನಿಲ್‌ಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ನವೀನ್ ಮತ್ತು ಅವರ ಕುಟುಂಬ ಸದಸ್ಯರು ಅನುವಂಶಿಕವಾದ ರೋಗಗಳಿಂದ ಬಳಲುತ್ತಿದ್ದು, ಆತ ಆಸ್ಪತ್ರೆಗೆ ಬಂದಾಗ ಅವರ ಸ್ಥಿತಿ ಚಿಂತಾಜನಕವಾಗಿತ್ತು. ದೀರ್ಘಕಾಲದಿಂದ ರೋಗದಿಂದ ಬಳಲುತ್ತಿದ್ದುದರಿಂದ ಅವರ ಮೂಳೆಗಳು ದುರ್ಬಲವಾಗತೊಡಗಿದ್ದವು.

ಇತರೆ ಅಂಗಗಳ ಮೇಲೆ ಗಂಭೀರ ಪರಿಣಾಮ ಬೀರತೊಡಗಿತ್ತು. ಅದೃಷ್ಠವಶಾತ್ ಅವರಿಗೆ ದಾನಿಯೊಬ್ಬರಿಂದ ಮೂತ್ರಪಿಂಡ ಲಭಿಸಿದ್ದರಿಂದ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದು ಸಾಮಾನ್ಯ ರೀತಿಯಲ್ಲಿ ನಡೆಯುವಂತಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News