ಭಾರಿ ಮಳೆ, ಭೂ ಕುಸಿತ: ಕಾಫಿ-ಸಾಂಬಾರು ಪದಾರ್ಥ ಬೆಳೆಗಳಿಗೂ ಪರಿಹಾರ- ಸಚಿವ ಸಂಪುಟ ಸಭೆ ತೀರ್ಮಾನ

Update: 2019-08-26 16:58 GMT

ಬೆಂಗಳೂರು, ಆ.26: ಭಾರಿ ಮಳೆ ಹಾಗೂ ಭೂ ಕುಸಿತದಿಂದಾಗಿ ಚಿಕ್ಕಮಗಳೂರು, ಕೊಡಗು ಹಾಗೂ ಹಳೇ ಮೈಸೂರು ಭಾಗದಲ್ಲಿ ಕಾಫಿ ಹಾಗೂ ಸಾಂಬಾರು ಪದಾರ್ಥಗಳ ಬೆಳೆಗಳು ಹಾಳಾಗಿವೆ. ಎನ್‌ಡಿಆರ್‌ಎಫ್ ನಿಯಮಾವಳಿ ಹೊರತಾಗಿಯೂ ಈ ಬೆಳೆಗಳಿಗೆ ಪರಿಹಾರ ನೀಡಲು ಸಣ್ಣಪಟ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದಾಗಿ ಆಗಿರುವ ನಷ್ಟ, ಸಮಸ್ಯೆಗಳ ಕುರಿತು ಸಚಿವರ ತಂಡ ಪ್ರವಾಸ ಮಾಡಿ ಪರಿಶೀಲಿಸಿದೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗಿದೆ ಎಂದರು.

ಮಳೆ ಹಾಗೂ ನೆರೆ ಹಾವಳಿಯಿಂದಾಗಿ ಗುಡ್ಡಗಳು ಕುಸಿದಿವೆ, ಮನೆಗಳು ನೆಲಸಮವಾಗಿವೆ. ಹಲವಾರು ಗ್ರಾಮಗಳು ಕೆಸರುಮಯವಾಗಿವೆ. ಕಾಫಿ ತೋಟಗಳು ಸುಮಾರು 500-600 ಮೀಟರ್‌ನಷ್ಟು ಕುಸಿದಿವೆ. ಶಾಲೆಗಳು, ಸರಕಾರಿ ಕಟ್ಟಡಗಳು, ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಅವರು ಹೇಳಿದರು.

ಪರಿಹಾರ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ 1.32 ಲಕ್ಷ ಕುಟುಂಬಗಳಿಗೆ ಈಗಾಗಲೇ ತಲಾ 10 ಸಾವಿರ ರೂ.ಗಳಂತೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ನೋಂದಣಿ ಮಾಡಿಸಲು ಸಾಧ್ಯವಾಗದೆ, ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುವ ಸಂತ್ರಸ್ತರಿಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಹೊಸ ಪಿಂಚಣಿ ಯೋಜನೆಯಡಿಯಲ್ಲಿ ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರದ ನೌಕರರಿಗೂ ಶೇ.14ರಷ್ಟು ಪಾಲು ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ, ಪ್ರತಿ ತಿಂಗಳು 27.96 ಕೋಟಿ ರೂ.ಹೊರೆಯಾಗಲಿದ್ದು, ವಾರ್ಷಿಕವಾಗಿ ಈ ಮೊತ್ತ 300 ಕೋಟಿ ರೂ.ಗಳಾಗಲಿದೆ ಮಾಧುಸ್ವಾಮಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ಸೇರಿ ತಲಾ 5 ಲಕ್ಷ ರೂ.ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ನೆರೆ ಸಂತ್ರಸ್ತರ ಪರವಾಗಿ ಕೇಂದ್ರ ಸರಕಾರಕ್ಕೆ ಒಂದು ಮನವಿ ಮಾಡಿ, ಮಹತ್ವದ ತೀರ್ಮಾನ ಕೈಗೊಳ್ಳುವಂತೆ ಒತ್ತಡ ಹೇರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ 53 ಕೆರೆಗಳಿಗೆ 660 ಕೋಟಿ ರೂ.ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಡಿಪಿಆರ್ ಆಗಿತ್ತು. ಇದೀಗ ಎರಡು ಹಂತಗಳಲ್ಲಿ ಈ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಮೊದಲನೆ ಹಂತದ ಕಾಮಗಾರಿಗೆ 250 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಲು ಗಾಂಧಿ ಸಾಕ್ಷಿ ಕಾಯಕ(ಜಿಎಸ್‌ಕೆ) ತಂತ್ರಾಂಶದ ಮೂಲಕ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಈ ಪ್ರಕ್ರಿಯೆಗೆ 15-20 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಆದುದರಿಂದ, 5 ಲಕ್ಷ ರೂ.ವರೆಗಿನ ಇಂತಹ ಕಾಮಗಾರಿಗಳಿಗೆ ಶಾಸಕರ ಅಧ್ಯಕ್ಷತೆಯಲ್ಲಿನ ಸಮಿತಿಗಳಲ್ಲಿ ತೀರ್ಮಾನಿಸಿ ಮುಂದುವರೆಯಬಹುದಾಗಿದೆ ಎಂದು ಅವರು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭೂ ವಿಜ್ಞಾನಿಗಳ ಕೊರತೆಯಿರುವುದರಿಂದ, ಅಗತ್ಯವಿರುವೆಡೆ ನಿವೃತ್ತಿ ಹೊಂದಿರುವ ಭೂ ವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಂಪುಟ ಉಪ ಸಮಿತಿ: ಮಹಾದಾಯಿ, ಕೃಷ್ಣ, ಕಾವೇರಿ ನದಿಗಳಿಗೆ ಸಂಬಂಧಿಸಿದಂತೆ ಅಂತರ್ ರಾಜ್ಯ ಜಲ ವಿವಾದಗಳು ನೆನೆಗುದಿಗೆ ಬಿದ್ದಿದೆ. ಸರಕಾರ ಹಿಂದೆ ತೀವ್ರಗತಿಯಲ್ಲಿ ಕ್ರಮಕೈಗೊಳ್ಳಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಆದುದರಿಂದ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್‌ರನ್ನು ಸದಸ್ಯರಾಗಿ ನೇಮಿಸಲಾಗಿದೆ. ಕೃಷ್ಣ ನದಿ ವಿಚಾರದಲ್ಲಿ ಕೇಂದ್ರ ಸರಕಾರದ ಪಿಟಿಷನ್ ಹಾಕಿಸಬೇಕಿದೆ. ಎಲ್ಲ ನದಿ ವಿವಾದಗಳ ಬಗ್ಗೆಯೂ ರಾಜ್ಯ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಎಸ್.ಸುರೇಶ್ ಕುಮಾರ್, ಸಿ.ಸಿ.ಪಾಟೀಲ್ ಉಪಸ್ಥಿತರಿದ್ದರು.

ಸನ್ನಡತೆ ಆಧಾರದಲ್ಲಿ 140 ಕೈದಿಗಳ(ಓರ್ವ ಮಹಿಳಾ ಕೈದಿ ಸೇರಿದಂತೆ)ನ್ನು ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News