ಆರರ ಬಾಲೆಯ ಮೇಲೆ ಅತ್ಯಾಚಾರ: ಸಂತ್ರಸ್ತೆಯ ಬಾಯಿ ಮುಚ್ಚಿಸಲು ಈತ ಮಾಡಿದ್ದೇನು ಗೊತ್ತೇ ?

Update: 2019-08-27 04:07 GMT

ಲಕ್ನೋ: ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಯುವಕನೊಬ್ಬ ಈ ವಿಷಯವನ್ನು ಎಲ್ಲೂ ಬಾಯಿ ಬಿಡದಂತೆ ಕೋರಿ ಆಕೆಗೆ 10 ರೂಪಾಯಿ ನೀಡಿ ಕಾಲ್ಕಿತ್ತ ಘಟನೆ ಬೆಳಕಿಗೆ ಬಂದಿದೆ.

ಬಾಲಕಿಯ ಸಂಬಂಧಿ ಯುವಕನೇ ಈ ಕೃತ್ಯ ಎಸಗಿದ್ದು, ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಮನೆಯಿಂದ ಸುಮಾರು 50 ಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಬಾಲಕಿ ಪತ್ತೆಯಾದಳು. ಬಾಲಕಿಯ ಮನೆಯವರು ಬಾಲಕಿಗೆ ಹುಡುಕಾಟ ಆರಂಭಿಸಿದ್ದು ತಿಳಿದ ತಕ್ಷಣ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

"ಆರೋಪಿ ಬಸಂತ್ ಎಂಬಾತನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಮನೆ ಪಕ್ಕದಲ್ಲೇ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಈತ ವಾಸವಿದ್ದ. ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 3/4 ಅನ್ವಯ ಪ್ರಕರಣ ದಾಖಲಿಸಲಾಗಿದೆ" ಎಂದು ಮಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿನೋದ್ ಕುಮಾರ್ ಗೋಸ್ವಾಮಿ ಹೇಳಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಾಗಿದೆ. ಬಾಲಕಿಯ ಮನೆಯವರು ಜನ್ಮಾಷ್ಟಮಿ ಕಾರ್ಯಕ್ರಮ ವೀಕ್ಷಿಸಲು ತೆರಳಿ ತಡರಾತ್ರಿ ವಾಪಸ್ಸಾದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸಂತ್ ಪಾನಮತ್ತನಾಗಿ ಮುಂಜಾನೆ 3ರ ಸುಮಾರಿಗೆ ಮನೆಗೆ ಬಂದಿದ್ದ. ತಾಯಿ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ. ಮನೆಯವರಿಗೆ ಎಚ್ಚರವಾಗಿ ಬಾಲಕಿಯನ್ನು ಹುಡುಕಲು ಆರಂಭಿಸಿದಾಗ ಆತ ಪಾರಿಯಾಗಿದ್ದಾನೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News