ನಾನು ಒಳಮೀಸಲಾತಿ ವಿರೋಧಿಯಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಸಂಸದ ಶ್ರೀನಿವಾಸ್ ಪ್ರಸಾದ್

Update: 2019-08-27 08:37 GMT

ಮೈಸೂರು: ನಾನು ಎಂದೂ ಒಳಮೀಸಲಾತಿ ವಿರೋಧಿಯಲ್ಲ ನನ್ನ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿ ಬರೆದಿವೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆ.23ರಂದು ಮೈಸೂರಿನ ವಿಜ್ಞಾನ ಭವನದಲ್ಲಿ ನಡೆದ ನೂರು ವರ್ಷಗಳ ಮೀಸಲಾತಿ ಕುರಿತ ವಿಚಾರ ಸಂಕಿರದಲ್ಲಿ ಮಾತನಾಡಿದ ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ಅರ್ಥೈಸಿಕೊಳ್ಳದೆ ಒಳ ಮೀಸಲಾತಿ ವಿರೋಧಿ ಎಂಬಂತಹ ಸುದ್ದಿಗಳನ್ನು ಬರೆದಿದ್ದರು. ನಾನು ಎಂದೂ ಒಳ ಮೀಸಲಾತಿ ವಿರೋಧಿಯಲ್ಲ, ಎಡಗೈ ಜನಾಂಗದ ವಿರೋಧಿಯಲ್ಲ, ಆಂಧ್ರಪ್ರದೇಶದ ಸರಕಾರದಲ್ಲಿ ಒಳಮೀಸಲಾತಿ ಜಾರಿಗಿಳಿಸಲಾಯಿತು. ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಚಿನ್ನಯ್ಯ ಎಂಬುವವರು ಸುಪ್ರೀಂ ಕೋಟ್೯ ಮೆಟ್ಟಿಲೇರಿದ್ದರು. ಆಗ ಮೀಸಲಾತಿಯಲ್ಲೇ ಒಳಮೀಸಲಾತಿ ಜಾರಿ ಮಾಡುವುದು ಸಂವಿಧಾನ ಬಾಹಿರ ಎಂದೇ ಸುಪ್ರೀಂ ಕೋಟ್೯ ತೀರ್ಪು ನೀಡಿದೆ. ಆ ವಿಚಾರವನ್ನಷ್ಟೇ ನಾನು ಹೇಳಿರವುದು. ಆದರೆ ಮಾಧ್ಯಮಗಳು ನಾನೆ ಒಳಮೀಸಲಾತಿ ವಿರೋಧಿ ಎಂಬಂತೆ ಬರೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಎಡಗೈ ವಿರೋಧಿಯಲ್ಲ, ದಲಿತ ವರ್ಗದಲ್ಲಿ ಎಡಗೈ, ಬಲಗೈ ಎಲ್ಲರೂ ಅಸ್ಪೃಶ್ಯತೆಗೆ ಒಳಗಾದವರೆ, ಸದಾಶಿವ ಆಯೋಗದ ವರದಿ ಜಾರಿ ಮಾಡಿದರೆ ಸುಪ್ರೀಂ ಕೋಟ್೯ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಮಿಲ್ಲರ್ ವರದಿ ಪ್ರಕಾರ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿ ಮಾಡಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಜಾರಿ ಮಾಡಿದರು. ಮೀಸಲಾತಿಗೆ ಒಳಪಟ್ಟ ಮೂಲ ಜಾತಿಯವರು ಯಾರಿದ್ದರೊ ಅವರಿಗೆ ಸರಿಯಾದ ಅವಕಾಶ ದೊರೆಯುವ ಬದಲು, ಕೆಲವರು ನಮ್ಮನ್ನು ಎಸ್ಸಿ, ಎಸ್ಟಿ ಗೆ ಸೇರಿಸಬೇಕು ಎಂದು ಮೀಸಲಾತಿಯನ್ನೇ ದುರುಪಯೋಗ ಮಾಡಿಕೊಂಡರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಡಿಸಿಸಿ ಬ್ಯಾಂಕ್ ನಿದೇರ್ಶಕ ಬಸವೇಗೌಡ, ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಸಂಘದ ಶಿವಕುಮಾರ್, ರಾಮಸ್ವಾಮಿ, ಭರತ್ ರಾಮಸ್ವಾಮಿ, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News