ಸಂಪುಟದಲ್ಲಿ ಹಿಂದುಳಿದ ವರ್ಗಗಳಿಗೆ ಅವಮಾನ: ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು

Update: 2019-08-27 12:44 GMT

ಬೆಂಗಳೂರು, ಆ.27: ದೇವರಾಜ ಅರಸು ಜನ್ಮದಿನದಂದು ಸಂಪುಟ ವಿಸ್ತರಣೆ ಮಾಡಿದ ಬಿಜೆಪಿ ಸರಕಾರ ಕೇವಲ ಇಬ್ಬರು ಹಿಂದುಳಿದ ವರ್ಗಗಳ ಪ್ರತಿನಿಧಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡು, ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡದೆ ಅವಮಾನ ಮಾಡಿದೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಆರೋಪಿಸಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಮೂರು ಜನ ಉಪ ಮುಖ್ಯಮಂತ್ರಿಗಳಿಗೆ ಜಾತಿವಾರು ಪ್ರಾತಿನಿಧ್ಯ ನೀಡಿರುವ ಬಿಜೆಪಿ ಸರಕಾರ, ಒಂದೇ ಸಮುದಾಯಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸಿರುವುದು ಆಶ್ಚರ್ಯಕರವಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದುಳಿದ ಜಾತಿ ಮತ್ತು ವರ್ಗಗಳಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ಮಾನ ನೀಡಲು ವಿಫಲವಾಗಿರುವ ಬಿಜೆಪಿ, ಉಪ ಮುಖ್ಯಮಂತ್ರಿಗಳ ನೇಮಕದಲ್ಲೂ ಹಿಂದುಳಿದ ಜಾತಿ ಮತ್ತು ವರ್ಗಗಳಿಗೆ ಅವಕಾಶ ನೀಡದೇ ಉದ್ದೇಶಪೂರ್ವಕವಾಗಿ ಈ ಸಮುದಾಯಗಳಿಗೆ ಅವಮಾನ ಮಾಡಲಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.

ಸಂಗೊಳ್ಳಿ ರಾಮಣ್ಣ ಬ್ರಿಗೆಡ್ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಧ್ವನಿ ಎತ್ತಲು ಪ್ರಯತ್ನ ಮಾಡಿದ್ದ ಕೆ.ಎಸ್.ಈಶ್ವರಪ್ಪ ಅಥವಾ ಹಿಂದುಳಿದ ವರ್ಗದ ಕೋಟಾ ಶ್ರೀನಿವಾಸ ಪೂಜಾರಿಗಾಗಲೀ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡಿಲ್ಲ. ಇದರ ಹಿಂದೆ ಹಿಂದುಳಿದ ವರ್ಗಗಳನ್ನು ಅವಮಾನಿಸುವ ಮತ್ತು ಈ ಸಮುದಾಯದ ಸಚಿವರನ್ನು ನಿರ್ಲಕ್ಷ್ಯ ಮಾಡುವ ಉದ್ದೇಶ ಬಿಜೆಪಿಗಿದೆ ಎಂದು ಅವರು ದೂರಿದ್ದಾರೆ.

ಕನಿಷ್ಠ ಪಕ್ಷ ತಮಗೆ ಮತ್ತು ತಮ್ಮ ಸಮುದಾಯಕ್ಕೆ ಆಗಿರುವ ಅವಮಾನವನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ನೈತಿಕ ಸ್ಥೈರ್ಯವನ್ನು ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಕೋಟಾ ಶ್ರೀನಿವಾಸ ಪೂಜಾರಿಯವರು ಕಳೆದುಕೊಂಡಿದ್ದಾರೆ ಎಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ಜಾತಿ ಮತ್ತು ವರ್ಗಗಳ ಮತವನ್ನು ಬಾಚಿಕೊಂಡಿರುವ ಬಿಜೆಪಿ ಈ ಜಾತಿ ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ಅವಮಾನಗೊಳಿಸುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಹಿಂದುಳಿದ ವರ್ಗಗಳ ಲೋಕಸಭಾ ಸದಸ್ಯ ಪಿ.ಸಿ.ಮೋಹನ್‌ಗೂ ಯಾವುದೇ ಸ್ಥಾನವನ್ನು ಕೇಂದ್ರದಲ್ಲಿ ನೀಡಿಲ್ಲ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿಯ ಹುನ್ನಾರವನ್ನು ಹಿಂದುಳಿದ ಜಾತಿ ಮತ್ತು ವರ್ಗಗಳು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ವ್ಯವಸ್ಥಿತವಾಗಿ ರಾಜ್ಯದಲ್ಲಿ ಹಿಂದುಳಿದ ಜಾತಿ ಮತ್ತು ವರ್ಗಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ರಮೇಶ್ ಬಾಬು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News