ನಳಿನ್‌ ಕಟೀಲ್ ನೇತೃತ್ವದಲ್ಲಿ 150 ಸ್ಥಾನ ಗೆಲ್ಲಲು ಸಿದ್ಧರಾಗಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್‌ವೈ ಕರೆ

Update: 2019-08-27 13:04 GMT

ಬೆಂಗಳೂರು, ಆ.27: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ನೇತೃತ್ವದಲ್ಲಿ ಮುಂದಿನ ಮೂರು ವರ್ಷ ಹತ್ತು ತಿಂಗಳು ವಿಶ್ರಾಂತಿ ಪಡೆಯದೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಿದ್ದರಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನಗರದ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳಿನ್‌ಕುಮಾರ್ ಕಟೀಲ್ ಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಂತಹ ಪ್ರಬಲ ನಾಯಕತ್ವ, ಅವಿರತವಾಗಿ ಶ್ರಮಿಸುವ ಕಾರ್ಯಕರ್ತರಿದ್ದಾರೆ. ಇವರೆಲ್ಲರ ಜೊತೆಗೂಡಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಮುಂದಿನ ಗುರಿಯಾಗಿದೆ ಎಂದರು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವ ಜತೆಗೆ ಮಂಡ್ಯದಲ್ಲೂ ನಮ್ಮ ಬೆಂಬಲಿತ ಅಭ್ಯರ್ಥಿಯೇ ಗೆದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತದಲ್ಲಿದ್ದಾಗಲೂ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲುವುದೆಂದರೆ ಅದು ಒಂದು ದಾಖಲೆಯೇ ಸರಿ. ಎಲ್ಲಾ ಪಕ್ಷಗಳಿಗಿಂತಲೂ ಬಿಜೆಪಿ ಸಂಘಟನೆ ಸಾಕಷ್ಟು ಪ್ರಬಲವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಯಾವುದಕ್ಕೂ ದೃತಿಗೆಡಬೇಕಾದ ಅಗತ್ಯವಿಲ್ಲ. ನಿಮ್ಮ ಜತೆ ಕಾರ್ಯಕರ್ತರ ದಂಡೇ ಕೈಜೋಡಿಸಲಿದೆ. ನೀವು ಮೂಲತಃ ಸಂಘಟನೆಯಿಂದಲೇ ಬಂದವರು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದಲ್ಲಿ ಯಾವ ರೀತಿ ಸಂಘಟನೆ ಮಾಡಿದ್ದೀರಿ ಎಂಬುದು ವರಿಷ್ಟರಿಗೆ ತಿಳಿದಿದೆ. ಆದ್ದರಿಂದಲೇ ನಿಮಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ನಿಷ್ಠಾವಂತ ಕಾರ್ಯಕರ್ತರ ಪಡೆ ನಿಮ್ಮೊಂದಿಗಿರುವಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಜತೆ ಕೈಗೆ ಕೈ, ಹೆಜ್ಜೆಗೆ ಹೆಜ್ಜೆ ಹಾಕಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಡಾ.ಅಶ್ವತ್ಥನಾರಾಯಣ, ಕೋಟಾ ಶ್ರೀನಿವಾಸ್ ಪೂಜಾರಿ, ಸಿ.ಟಿ.ರವಿ, ಪ್ರಭು ಚೌವ್ಹಾಣ್ ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ತಬ್ಬಲಿಯಾಗಿದೆ

ಪ್ರಧಾನಿ ನರೇಂದ್ರ ಮೋದಿಯ ಕಾಂಗ್ರೆಸ್ ಮುಕ್ತ ಭಾರತದ ಆಶಯದಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನವನ್ನೂ ನೀಡದೆ ಹೀನಾಯವಾಗಿ ಸೋಲಿಸಿದ್ದಾರೆ. ಸದ್ಯ ಕಾಂಗ್ರೆಸ್ ಕಾರ್ಯಕರ್ತರು ನಾಯಕತ್ವ ಇಲ್ಲದೆ ತಬ್ಬಲಿಯಾಗಿದ್ದಾರೆ.

-ಬಿ.ಎಸ್.ಯಡಿಯೂರಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News