ತಿಪ್ಪೆಗುಂಡಿಗಳಿದ್ದ, ಬಯಲು ಬಹಿರ್ದೆಸೆಯ ಸ್ಥಳದಲ್ಲಿ ನೆರೆ ಸಂತ್ರಸ್ತರಿಗೆ ಶೆಡ್‌: ವ್ಯಾಪಕ ಆಕ್ರೋಶ

Update: 2019-08-27 13:36 GMT
ಸಾಂದರ್ಭಿಕ ಚಿತ್ರ

#ಮೂಗು ಮುಚ್ಚಿಕೊಂಡೇ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು 

ಹಾವೇರಿ, ಆ.27: ಇತ್ತೀಚಿಗೆ ಉಂಟಾದ ಪ್ರವಾಹ, ನೆರೆಯಿಂದಾಗಿ ಸಂತ್ರಸ್ತರಾದವರಿಗೆ ಕಸವನ್ನು ತಂದು ಸುರಿಯುವ, ಬಯಲು ಬಹಿರ್ದೆಸೆಯ ಸ್ಥಳದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ. 

ಹಾವೇರಿ ಜಿಲ್ಲೆಯ ನಾಗನೂರು ಗ್ರಾಮದ ಸಂತ್ರಸ್ತರಿಗೆ ಜಿಲ್ಲಾಡಳಿತ ಶೆಡ್‌ಗಳನ್ನು ನಿರ್ಮಿಸಲು ಮುಂದಾಗಿದೆ. ಆದರೆ, ಸ್ವಚ್ಛವಾದ ಪರಿಸರವಿಲ್ಲದ ಕಡೆ ನಿರ್ಮಾಣ ಮಾಡುತ್ತಿದೆ. ಜಿಲ್ಲಾಡಳಿತದ ಇಂತಹ ಅಮಾನವೀಯ ನಡೆಗೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಗ್ರಾಮದಲ್ಲಿ ನೆರೆಯಿಂದಾಗಿ 37 ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು, ಎಲ್ಲರೂ ಶಾಲಾ ಕೊಠಡಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರನ್ನು ಇಲ್ಲಿಂದ ಸ್ಥಳಾಂತರ ಮಾಡುವ ಸಲುವಾಗಿ ಶೆಡ್‌ಗಳ ನಿರ್ಮಾಣಕ್ಕೆ ಮುಂದಾಗಿದೆ. ಅದಕ್ಕಾಗಿ, ಅವಸರದಲ್ಲಿ ಜೆಸಿಬಿಗಳ ಮೂಲಕ ತಿಪ್ಪೆಗಳಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ, ಅಲ್ಲಿಯೇ ವಸತಿ ಕಲ್ಪಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

ನಾವು ಬೀದಿಯಲ್ಲೇ ಮಲಗಿದರೂ ಸರಿ, ಅಲ್ಲಿಗೆ ಹೋಗುವುದಿಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ. ಜಿಲ್ಲಾಡಳಿತವು ನೆರೆಯಿಂದ ಸಂತ್ರಸ್ತರಾದವರನ್ನು ಅತ್ಯಂತ ಅಮಾನೀಯವಾಗಿ ಕಾಣುತ್ತಿದೆ. ಇದು ಸರಿಯಾದ ಕ್ರಮವಲ್ಲ. ಮನುಷ್ಯರು ಬದುಕಲು ಯೋಗ್ಯವಾದ ಒಂದು ಸ್ಥಳ ಗುರುತಿಸಿ ಅಲ್ಲಿ ಶೆಡ್ ನಿರ್ಮಿಸಿ ಎಂದು ಆಗ್ರಹಿಸಿದ್ದಾರೆ.

ಮೂಗು ಮುಚ್ಚಿಕೊಂಡ ಅಧಿಕಾರಿ: ಶೆಡ್ ನಿರ್ಮಿಸುತ್ತಿರುವ ಸ್ಥಳವನ್ನು ತಲುಪಲು ಕೆಸರು ಗದ್ದೆ ಹಾಗೂ ತಿಪ್ಪೆಗುಂಡಿಗಳನ್ನು ದಾಟಿಕೊಂಡೇ ಹೋಗಬೇಕು. ಇಲ್ಲಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಮೂಗು ಮುಚ್ಚಿಕೊಂಡೇ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದಲ್ಲಿ ಇರುವುದು ಇದೊಂದೇ ಖಾಲಿ ಸ್ಥಳವಾಗಿದೆ. ಹೀಗಾಗಿ, ಇಲ್ಲಿಯೇ ಶೆಡ್ ನಿರ್ಮಾಣ ಮಾಡಿ ಎಂದು ನಿರ್ಮಿತಿ ಕೇಂದ್ರದ ಸಿಬ್ಬಂದಿಗೆ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ, ಇಲ್ಲಿ ಶೆಡ್ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿ ಹೇಳಿದ್ದಾರೆ.

ವಾಸ ಮಾಡಲು ಸಾಧ್ಯಾನಾ?: ಇಲ್ಲಿ 20 ಶೆಡ್‌ಗಳನ್ನು ಕಟ್ಟಲು ಹೇಳಿದ್ದಾರೆ. ನಾವೂ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಅವರ ಆಜ್ಞೆ ಪಾಲಿಸುತ್ತಿದ್ದೇವೆ. ಕನಿಷ್ಠ ಈ ತಿಪ್ಪೆಗಳನ್ನಾದರೂ ಬೇರೆಡೆ ಸ್ಥಳಾಂತರಿಸಿದರೆ ಅಷ್ಟೇ ಸಾಕು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶೆಡ್‌ಗಳನ್ನು ತೆಗೆಸುತ್ತೇವೆ: ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ, ಶೆಡ್ ನಿರ್ಮಿಸಬಹುದು ಎಂದಿದ್ದರಿಂದ ಒಪ್ಪಿಗೆ ಸೂಚಿಸಿದ್ದೆವು. ಆದರೆ, ಈ ಸ್ಥಳ ಸೂಕ್ತವಲ್ಲ ಎಂದು ತಿಳಿದುಬಂದಿದೆ. ಅದನ್ನು ಕೂಡಲೇ ತೆರವು ಮಾಡಿಸುತ್ತೇವೆ. ಕುಸಿದು ಬಿದ್ದ ಅವರ ಮನೆಗಳ ಬಳಿಯೇ ಶೆಡ್ ಹಾಕಿಕೊಡಲು ತೀರ್ಮಾನಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News