ಡಿಸಿಎಂ ಎಂಬುದು ಸಾಂವಿಧಾನಿಕ ಹುದ್ದೆಯಲ್ಲ: ಜಗದೀಶ್ ಶೆಟ್ಟರ್

Update: 2019-08-27 13:42 GMT

ಹುಬ್ಬಳ್ಳಿ, ಆ.27: ಉಪ ಮುಖ್ಯಮಂತ್ರಿ ಎಂಬುದು ಸಾಂವಿಧಾನಿಕ ಹುದ್ದೆಯಲ್ಲ. ಕೇವಲ ಗೌರವ ನೀಡುವ ಉದ್ದೇಶದಿಂದ ಸೃಷ್ಟಿಯಾಗಿರುವಂತಹದ್ದು. ಖಾತೆಗಳ ಹಂಚಿಕೆ ವೇಳೆ ನನಗೆ ಆ ಹುದ್ದೆ ನೀಡಿದ್ದರೂ ನಾನು ಸ್ವೀಕರಿಸುತ್ತಿರಲಿಲ್ಲ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ಕುರಿತು ಪಕ್ಷದ ವರಿಷ್ಠರು ಕೈಗೊಂಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತ, ಅಸಮಾಧಾನವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಹುಟ್ಟಿಕೊಂಡಿದೆ ಎಂಬುದು ಗೊತ್ತಿಲ್ಲ. ಅವರು ಮೊದಲು ಅವರ ಪಕ್ಷವನ್ನು ನೋಡಿಕೊಳ್ಳಲಿ, ನಮ್ಮ ಬಗ್ಗೆ ಚಿಂತನೆ ಮಾಡುವ ಅಗತ್ಯವಿಲ್ಲ ಎಂದು ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿರುವ ಗೊಂದಲಗಳಿಂದಾಗಿ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ನಮ್ಮ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಆಲೋಚನೆ ಮಾಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಟಿ.ಪಾಟೀಲ್ ಮಾತನಾಡಿ, ಸಚಿವ ಸಂಪುಟ ರಚನೆ, ವಿಸ್ತರಣೆ ಮಾಡುವಾಗ ಯಾವುದೇ ಸರಕಾರವಿರಲಿ ಸಣ್ಣಪುಟ್ಟ ಅಸಮಾಧಾನ, ಗೊಂದಲಗಳು ಇರುವುದು ಸಹಜ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದರು.

ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರ ತಾಯಿ ನಿಧನ ಹೊಂದಿದ್ದಾರೆ. ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಾನು ಹಾಗೂ ಜಗದೀಶ್ ಶೆಟ್ಟರ್ ಇಲ್ಲಿಗೆ ಬಂದಿದ್ದೇವೆ. ಆದುದರಿಂದ, ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News