ಬೆಳೆಹಾನಿ ಪರಿಹಾರ: ಪಹಣಿ ಪತ್ರ, ಛಾಯಾಚಿತ್ರ ಕಡ್ಡಾಯವಲ್ಲ- ಕೊಡಗು ಜಿಲ್ಲಾಧಿಕಾರಿ ಸ್ಪಷ್ಟನೆ

Update: 2019-08-27 18:31 GMT

ಮಡಿಕೇರಿ, ಆ.27: ಪ್ರಸಕ್ತ ಸಾಲಿನಲ್ಲಿ ಬಿದ್ದ ಭಾರೀ ಮಳೆಯಿಂದ ಕೃಷಿ, ತೋಟಗಾರಿಕೆ, ಕಾಫಿ ಮತ್ತು ಸಂಬಾರ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ಅರ್ಜಿ ಸಲ್ಲಿಸುವ ಸಂದರ್ಭ ಪಹಣಿ ಪತ್ರ ಮತ್ತು ಬೆಳೆ ಹಾನಿಯಾದ ಛಾಯಾಚಿತ್ರಗಳನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟಪಡಿಸಿದ್ದಾರೆ.

ಬೆಳೆ ಹಾನಿ ಪರಿಹಾರ ಸಂಬಂಧ ಈಗಾಗಲೇ ನಿಗದಿತ ನಮೂನೆಯಲ್ಲಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂದರ್ಭ ಪಹಣಿ ಮತ್ತು ಛಾಯಾಚಿತ್ರ ಕಡ್ಡಾಯವಲ್ಲ. ಆದರೆ ಅವುಗಳು ಲಭ್ಯವಿದ್ದಲ್ಲಿ ನೀಡಿದಲ್ಲಿ ಪರಿಶೀಲನೆ ಮತ್ತು ದಸ್ತಾವೇಜಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಬೆಳೆ ನಷ್ಟವನ್ನು ಅಂದಾಜಿಸುವ ಸಂದರ್ಭ ವಿವಿಧ ಬೆಳೆಗಳ ನಷ್ಟವನ್ನು ಸಂಬಂಧಿಸಿದ ಇಲಾಖೆಗಳು ಅಂದಾಜಿಸುವುದರಿಂದ ಮತ್ತು ಪರಿಹಾರ ತಂತ್ರಾಂಶದಲ್ಲಿ ಸರ್ವೆ ನಂಬರ್‍ವಾರು ವಿವರಗಳನ್ನು ದಾಖಲಿಸಬೇಕಾಗಿರುವುದರಿಂದ ರೈತರು ಸ.ನಂ.ವಾರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಅರ್ಜಿಯಲ್ಲಿ ನಮೂದಿಸದ ಸರ್ವೆ ನಂಬರ್ ಪರಿಹಾರ ತಂತ್ರಾಂಶದಲ್ಲಿ ದಾಖಲಾಗುವುದಿಲ್ಲ ಎಂದೂ ತಿಳಿಸಿರುವ ಜಿಲ್ಲಾಧಿಕಾರಿಗಳು, ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಸೀಡ್ ಆಗಿರುವ ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕು ಎಂದೂ ಸ್ಪಷ್ಟಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News