ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ

Update: 2019-08-27 18:34 GMT

ಮಡಿಕೇರಿ, ಆ.27: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಭೂ ಕುಸಿತ ಹಾಗೂ ಪ್ರವಾಹ ಉಂಟಾಗಿ ಜನ, ಜಾನುವಾರು ಪ್ರಾಣ ಹಾನಿ, ವಾಸದ ಮನೆ ಹಾಗೂ ಬೆಳೆ ಹಾನಿ ಸೇರಿ ಹಲವು ರೀತಿಯ ಸಂಕಷ್ಟ ಎದುರಾಗಿತ್ತು. ಈ ಸಂಬಂಧ ಕೇಂದ್ರ ತಂಡದ ಅಧಿಕಾರಿಗಳು ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು ಬೆಳೆ ಹಾನಿ ಪ್ರದೇಶಗಳು ಹಾಗೂ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರ, ಕಾವೇರಿ ನದಿ ಪಾತ್ರದ ಬಳಿಯ ಕುಂಬಾರಗುಂಡಿ, ಕರಡಿಗೋಡು ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.   

ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯರಿಂದ ಕೇಂದ್ರ ತಂಡದ ಅಧಿಕಾರಿಗಳು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಿನ ಸ್ಥಳೀಯರಾದ ಭರತ್ ಅವರು, ಹಲವು ವರ್ಷಗಳಿಂದ ಪೈಸಾರಿ ಜಾಗದಲ್ಲಿ ಹಲವು ಕಾರ್ಮಿಕ ಕುಟುಂಬಗಳು ವಾಸ ಮಾಡಿಕೊಂಡು ಬರುತ್ತಿದ್ದು, ಪ್ರವಾಹದಿಂದಾಗಿ ಸಂತ್ರಸ್ತರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶಾಶ್ವತವಾಗಿ ಪುನರ್ ವಸತಿ ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು.  

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ವಾಸ ಮಾಡುತ್ತಿದ್ದು, ಇವರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು.  

ಸಂಗೀತ ಅವರು ಮಾಹಿತಿ ನೀಡಿ, ಕಾವೇರಿ ನದಿ ಪಾತ್ರದ ಬಳಿ ವಾಸ ಮಾಡುತ್ತಿರುವವರು ಕಳೆದ ಎರಡು ವರ್ಷಗಳಿಂದ ಪ್ರವಾಹ ಉಂಟಾಗಿ ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಬಳಿಕ ಕೇಂದ್ರ ತಂಡದ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಾದ ಕುಂಬಾರಗುಂಡಿ ಹಾಗೂ ಕರಡಿಗೋಡು ಗ್ರಾಮಗಳಲ್ಲಿ ಮನೆ ಹಾನಿಯಾಗಿರುವುದನ್ನು ವೀಕ್ಷಿಸಿದರು. 

ಈ ಸಂದರ್ಭದಲ್ಲಿ ಕರಡಿಗೋಡು ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಾದ ಚಂದ್ರು ಅವರು 50 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ ಈ ವರ್ಷದಷ್ಟು ಪ್ರವಾಹ ಎಂದೂ ಬಂದಿರಲಿಲ್ಲ. ಪ್ರವಾಹದಿಂದಾಗಿ ಮೂರು ಬೆಡ್ ರೂಮ್ ಒಳಗೊಂಡ ಪದಾರ್ಥಗಳು ಸೇರಿದಂತೆ ಮನೆ ಕಳೆದುಕೊಳ್ಳುವಂತಾಗಿದೆ ಎಂದು ಅವರು ಅವಲತ್ತುಕೊಂಡರು.  

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರು ಹಾಗೂ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಕಾಶ್ ಅವರು, ಮನೆ, ಬೆಳೆ ಹಾಗೂ ರಸ್ತೆ ಹಾನಿ ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಾಗಿದೆ. ಜೊತೆಗೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಂದ ಮಾಹಿತಿ ಪಡೆಯಲಾಗಿದೆ. ಹಾಗೆಯೇ ಪ್ರಸಕ್ತ ವರ್ಷದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ಬಗ್ಗೆ ಜಿಲ್ಲಾಡಳಿತ ದಾಖಲೆ ಸಹಿತ ಮಾಹಿತಿ ನೀಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದರು. 

ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಮಾನವ ಪ್ರಾಣಹಾನಿ, ಜಾನುವಾರು ಹಾನಿ, ಮನೆ ಹಾಗೂ ಬೆಳೆ ಹಾನಿ ಹೀಗೆ ಸಾಕಷ್ಟು ನಷ್ಟ ಉಂಟಾಗಿದ್ದು, ಈ ಸಂಬಂಧ ಕೇಂದ್ರ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.  

ಭಾರತ ಸರ್ಕಾರದ ಆರ್ಥಿಕ ಇಲಾಖೆಯ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ  ಪುನ್ನುಸ್ವಾಮಿ, ಬೆಂಗಳೂರಿನ ಕೇಂದ್ರ ಸರ್ಕಾರದ ಜಲಮೂಲ ಪ್ರಾದೇಶಿಕ ಕಚೇರಿಯ ಎಸ್.ಇ., ಜಿತೇಂದ್ರ ಪಣ್ವಾರ್, ರಸ್ತೆ ಮತ್ತು ಸಾರಿಗೆ ಮತ್ತು ಹೆದ್ದಾರಿ ವಿಭಾಗದ ವಿಜಯ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಣಿಕ್ ಚಂದ್ರ ಪಂಡಿತ್, ಇಂಧನ ಇಲಾಖೆಯ ಒ.ಪಿ.ಸುಮನ್, ಜಿ.ಪಂ.ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ವಾಲ್ನೂರು-ತ್ಯಾಗತ್ತೂರು ಕ್ಷೇತ್ರದ ಜಿ.ಪಂ.ಸದಸ್ಯೆ ಸುನಿತಾ ಎಂ.ಬಿ., ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ತಹಶೀಲ್ದಾರ್ ಗೋವಿಂದರಾಜು ಪುರಂದರ, ನಾನಾ ಇಲಾಖೆ ಅಧಿಕಾರಿಗಳು, ಪ.ಪಂ. ಮುಖ್ಯಾಧಿಕಾರಿಗಳು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News