ನನ್ನ ಮಗಳನ್ನು ಕೊಲೆ ಮಾಡಲಾಗಿದೆ: ಮೃತ ವಿದ್ಯಾರ್ಥಿನಿ ತಂದೆ ಆರೋಪ, ತನಿಖೆಗೆ ಆಗ್ರಹ

Update: 2019-08-27 18:39 GMT

ಮಂಡ್ಯ, ಆ.27: ಪಾಂಡವಪುರ ತಾಲೂಕಿನ ಕೆರೆತೆಣ್ಣೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ನನ್ನ ಮಗಳು ಎ.ಜಿ.ರಕ್ಷಿತಾಳನ್ನು ಕೊಲೆ ಮಾಡಲಾಗಿದೆ ಎಂದು ರಕ್ಷಿತಾಳ ತಂದೆ ಎ.ಟಿ.ಗೋಪಾಲ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗಳು ರಜೆ ಸಂದರ್ಭದಲ್ಲಿ ಮನೆಗೆ ಬಂದಾಗ ಮೌನವಾಗಿರುತ್ತಿದ್ದಳು. ಆಗ ಬಗ್ಗೆ ವಿಚಾರಿಸಿದಾಗ ವಸತಿ ನಿಲಯ ಪಾಲಕಿ ಪುಷ್ಪಲತಾ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಳು ಎಂದು ದೂರಿದರು.
ಆ.18ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಗೆಳತಿಯ ಮುಖಾಂತರ ಕರೆಮಾಡಿ ನನಗೆ ಇಲ್ಲಿ ಓದಲು ಇಷ್ಟವಿಲ್ಲ. ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದಳು ಎಂದು ಅವರು ಹೇಳಿದರು.

ಅದಲ್ಲದೆ ಅಲ್ಲಿನ ಹಿಂದಿ ಶಿಕ್ಷಕಿಯಾಗಿದ್ದ ಪಾರ್ವತಿಯವರು ಸಹ ನನ್ನ ಹಿರಿಯ ಮಗಳಿಗೆ ಕರೆಮಾಡಿ ನಿಮ್ಮ ಮಗಳಿಗೆ ನಿಲಯ ಪಾಲಕರು ಹಲ್ಲೆ ಮಾಡಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದರಿಂದ ಗಾಬರಿಗೊಂಡ ನಾವು ಮಧ್ಯಾಹ್ನ 12ಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ವಾರ್ಡನ್ ಇರಲಿಲ್ಲ. ಹಿಂದಿ ಶಿಕ್ಷಕಿಯ ಸಮ್ಮುಖದಲ್ಲಿಯೇ ಮಗಳಿಗೆ ಧೈರ್ಯ ಹೇಳಿ ಬಂದಿದ್ದೆವು. ಅದಾದ ಬಳಿಕ ಆ.22ರಂದು ರಾತ್ರಿ 10 ಗಂಟೆ ಸಮಯದಲ್ಲಿ ಒಂದು ಮೊಬೈಲ್ ನಂಬರ್‍ನಿಂದ ಕರೆಮಾಡಿ, ನಿಮ್ಮ ಮಗಳಿಗೆ ಹುಷಾರಿಲ್ಲ. ಪಾಂಡವಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ನೀವು ಬನ್ನಿ ಎಂದು ತಿಳಿಸಿದರು.

ತಡರಾತ್ರಿ 11 ಗಂಟೆಗೆ ನಾವು ಆಸ್ಪತ್ರೆಗೆ ಹೋಗಿದ್ದಾಗ ನನ್ನ ಮಗಳು ಶವಾಗಾರದಲ್ಲಿ ಶವವಾಗಿ ಮಲಗಿದ್ದಳು. ಆ ಸಮಯದಲ್ಲಿ ವಸತಿ ನಿಲಯದ ಯಾವುದೇ ಸಿಬ್ಬಂದಿಗಳು ಇರಲಿಲ್ಲ. ಕರ್ತವ್ಯದಲ್ಲಿದ್ದ ಪೊಲೀಸರು ಠಾಣೆಗೆ ತಮ್ಮನ್ನು ಕರೆದುಕೊಂಡು ಹೋಗಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದರು ಎಂದು ಅವರು ವಿವರಿಸಿದರು.

ನನ್ನ ಮಗಳ ಸಾವಿನ ವಿಷಯವನ್ನು ನನಗೂ ಹಾಗು ಪೊಲೀಸರಿಗೂ ತಿಳಿಸದೆ ವಸತಿ ನಿಲಯದಿಂದ ನೇರವಾಗಿ ಆಸ್ಪತ್ರೆಗೆ ತಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಆ.23ರಂದು ವಸತಿ ನಿಲಯದ ಮುಂದೆ ಪ್ರತಿಭಟನೆ ನಡೆಸಿ, ನಂತರ ಕೊಲೆ ದೂರು ದಾಖಲಿಸಿದೆವು ಎಂದು ಹೇಳಿದರು.
ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿರುವ ಪೊಲೀಸರು ಘಟನಾ ಸ್ಥಳಕ್ಕೆ ಬಿಡಲಿಲ್ಲ. ಗಲಾಟೆ ಮಾಡಿದ್ದರಿಂದ ವಸತಿ ನಿಲಯದ ಬಾತ್‍ರೂಂ ತೋರಿಸಿದರು. ಆದರೆ, ಅಲ್ಲಿ ನೇಣು ಹಾಕಿಕೊಳ್ಳುವಂಥ ಯಾವುದೇ ಸಾಕ್ಷಿ ಇರಲಿಲ್ಲ. ಬಟ್ಟೆ ನೇತು ಹಾಕುವ ಸ್ಟೀಲ್ ಕಂಬಿಯನ್ನು ತೋರಿಸಿದರು. ಇದೂ ಸಹ ನಮಗೆ ಅನುಮಾನ ಮೂಡಿಸಿತು. ಸ್ಟೀಲ್ ಕಂಬಿಗೂ ನೆಲಕ್ಕೂ 5.5 ಅಡಿ ಇತ್ತು. ನನ್ನ ಮಗಳು ಸಹ 5.5 ಅಡಿ ಇದ್ದಾಳೆ. ಅಲ್ಲದೆ, 45 ಕೆಜಿ ತೂಕವಿದ್ದಳು. ಸ್ಟೀಲ್ ಕಂಬಿ ಅಷ್ಟೂ ಬಾರವನ್ನು ಹೇಗೆ ತಡೆಯುತ್ತದೆ ಎಂದು ಅವರು ತಿಳಿಸಿದರು.

ಆಕೆಯ ಶವವನ್ನು ನೋಡಿದರೆ, ನೇಣು ಬಿಗಿದುಕೊಂಡ ಯಾವುದೇ ಕುರುಹು ಇರಲಿಲ್ಲ. ಎಡ ಕಿವಿ ಹಾಗು ಹೊಟ್ಟೆಯ ಎಡ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಇದನ್ನು ಗಮನಿಸಿದರೆ ಬಲವಾದ ವಸ್ತುವಿನಿಂದ ಹಲ್ಲೆ ಮಾಡಿರುವುದು ಕಂಡು ಬರುತ್ತದೆ. ನನ್ನ ಮಗಳ ಸಾವಿಗೆ ನಿಲಯ ಪಾಲಕಿ ಪುಷ್ಪಲತಾ ಕಾರಣರಾಗಿದ್ದು, ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ನ್ಯಾಯ ದೊರಕಿಸಿಕೊಡಬೇಕು ಅವರು ಎಂದು ಒತ್ತಾಯಿಸಿದರು.

ರಕ್ಷಿತಾ ತಾಯಿ ಪದ್ಮ, ಆಲೇನಹಳ್ಳಿ ಗ್ರಾಮದ ಮುಖಮಡರಾದ ಸಂತೋಷ್, ಲೋಕೇಶ್, ಪ್ರದೀಪ್, ಬಸವೇಗೌಡ ಹಾಗು ಮೋಹನ್‍ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News