ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾದರೆ ಗಂಭೀರ ಪರಿಣಾಮ: ಸಿದ್ದರಾಮಯ್ಯ ಎಚ್ಚರಿಕೆ

Update: 2019-08-28 11:49 GMT

ಬೆಳಗಾವಿ, ಆ. 28: ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೂಡಲೇ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಅಗ್ಗದ ದರದಲ್ಲಿ ಊಟ, ಉಪಾಹಾರ ನೀಡುವ ಕ್ಯಾಂಟೀನ್ ಯೋಜನೆಗೆ 2.34 ಲಕ್ಷ ರೂ.ಬಜೆಟ್ ಮಂಡಿಸಿರುವ ಸರಕಾರಕ್ಕೆ 400 ಕೋಟಿ ರೂ.ಒದಗಿಸಲು ಸಾಧ್ಯವಿಲ್ಲ ಎಂದರೆ ಬಡವರ ಬಗ್ಗೆ ಇವರಿಗಿರುವ ಕಳಕಳಿ ಎಷ್ಟು ಎಂದು ಗೊತ್ತಾಗಲಿದೆ ಎಂದು ಟೀಕಿಸಿದರು.

ಕ್ಯಾಂಟೀನ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತರ ಬಳಿ ಮಾತನಾಡಿದ್ದೇನೆ. ಸರಕಾರ ಅನುದಾನ ನೀಡುವುದಿಲ್ಲ ಎಂದರೆ ಸರಿಯಲ್ಲ. ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ಇರುವುದಿಲ್ಲ. ಸರಕಾರವೇ ಅನುದಾನ ನೀಡುವ ಮೂಲಕ ಇಂದಿರಾ ಕ್ಯಾಂಟೀನ್ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಅತ್ಯಂತ ಜನಪ್ರಿಯವಾಗಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆಯುತ್ತೇನೆ. ಅಲ್ಲದೆ, ಕೂಡಲೇ ಕ್ಯಾಂಟೀನ್‌ಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮೋದಿಗೆ ಸಯಮವಿಲ್ಲ: ವಿದೇಶಕ್ಕೆ ಹೋಗಲು ಪ್ರಧಾನಿ ಮೋದಿಗೆ ಸಮಯವಿದೆ. ಆದರೆ, ರಾಜ್ಯದ ಪ್ರವಾಹ ಪೀಡಿತರಿಗೆ ಸ್ಪಂದಿಸಲು ಅವರಿಗೆ ಸಮಯ ಇಲ್ಲವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅವರಿಗೆ ವಿದೇಶಗಳಲ್ಲಿ ಪ್ರಚಾರದ ಹುಚ್ಚು. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರವಾಹ ನಿರ್ವಹಣೆಗೆ ಕೇಂದ್ರ ಸರಕಾರ ಈವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಲಿಲ್ಲ. ಬಿಜೆಪಿಯ 25 ಸಂಸದರಿದ್ದಾರೆ. ಅವರು ಹೋಗಿ ಹಣ ಬಿಡುಗಡೆ ಮಾಡಿಸಬೇಕಿತ್ತಲ್ಲವೇ? ಕೇಂದ್ರ ಅಧ್ಯಯನ ತಂಡ ವರದಿ ಆಧರಿಸಿಯಾದರೂ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News