ರಾಜ್ಯದಲ್ಲಿ 449 ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ

Update: 2019-08-29 16:32 GMT

ಬೆಂಗಳೂರು, ಆ.29: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಖಾಸಗಿ ಶಾಲೆಗಳು ನಾಯಿಕೊಡೆಯಂತೆ ಬೆಳೆಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಸರಕಾರ ನೂತನವಾಗಿ 449 ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ.

ರಾಜ್ಯದಲ್ಲಿ ಈಗಾಗಲೇ 19,500ಕ್ಕೂ ಅಧಿಕ ಖಾಸಗಿ ಶಾಲೆಗಳು ಇವೆ. ಇದರ ನಡುವೆ ಇದೀಗ 449 ಶಾಲೆಗಳು ಸೇರ್ಪಡೆಗೊಂಡಿವೆ. 2019-20 ನೆ ಸಾಲಿನ ಹೊಸ ಹಾಗೂ ಹಾಲಿ ಇರುವ ಶಾಲೆಗಳ ಸಂಯೋಜನೆ ನವೀಕರಣಕ್ಕೆ ಅನುಮತಿ ಕೋರಿ 2,052 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 1,117 ಶಾಲೆಗಳಿಗೆ ಮಾನ್ಯತೆಗೆ ಅವಕಾಶ ನೀಡಲಾಗಿದೆ.

ಈ ಪೈಕಿ 449 ಶಾಲೆಗಳಿಗೆ(ಪೂರ್ವ ಪ್ರಾಥಮಿಕದಿಂದ 5 ನೆ ತರಗತಿವರೆಗೆ) ಅನುಮತಿ ನೀಡಲಾಗಿದೆ. ಅದೇ ರೀತಿ 6 ರಿಂದ 8 ನೆ ತರಗತಿಗೆ 478 ಶಾಲೆ, 9 ರಿಂದ 10 ನೆ ತರಗತಿಗೆ 223 ಶಾಲೆ, 1 ರಿಂದ 10 ನೆ ತರಗತಿಗೆ 27 ಶಾಲೆಗಳಿಗೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಅರ್ಜಿ ಸಲ್ಲಿಕೆಯ ಪ್ರಮಾಣ ಕಡಿಮೆಯಾಗಿದೆ. 2018 ರಲ್ಲಿ 2,429 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 942 ಪೂರ್ವ ಪ್ರಾಥಮಿಕದಿಂದ 5 ನೆ ತರಗತಿಗೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳಾಗಿದ್ದವು.

ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ 32 ಅರ್ಜಿಗಳನ್ನು ಪರಿಶೀಲನೆ ಮಾಡಿ ಎಲ್ಲದಕ್ಕೂ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಉಳಿದಂತೆ ವಿವಿಧ ಹಂತದಲ್ಲಿ ಸಂಯೋಜನೆ ನವೀಕರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ 2,020 ಅರ್ಜಿಗಳ ಪೈಕಿ 374 ಅರ್ಜಿಗಳನ್ನು ರದ್ದು ಮಡಲಾಗಿದ್ದು, 501 ಅರ್ಜಿಗಳು ಇತ್ಯರ್ಥಗೊಳಿಸುವ ಹಂತದಲ್ಲಿ ತಡೆ ಹಿಡಿಯಲಾಗಿದೆ.

ಶಾಲಾ ಆಡಳಿತ ಮಂಡಳಿಗಳು ಮಾನ್ಯತೆ ಪಡೆಯಬೇಕಾದರೆ ಶಿಕ್ಷಣ ಇಲಾಖೆ ನಿಗದಿ ಮಾಡಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಈ ರೀತಿ ಪಾಲಿಸದೇ ಉಳಿದ ಶಾಲೆಗಳಿಗೆ ಸೂಚನೆ ನೀಡಿ ಕೊರತೆ ನೀಗಿಸಿಕೊಳ್ಳುವಂತೆ ಸೂಚಿಸಲಾಗುವುದು. ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಅರ್ಜಿಯನ್ನು ರದ್ಧು ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News